ಕಾಸರಗೋಡು: ನಿನ್ನೆ ಕಾಸರಗೋಡು ನಗರದ ಅಶ್ವಿನಿ ನಗರದಲ್ಲಿ ತಂಡವೊಂದು ಥಳಿಸಿದ ಅಲ್ಪ ಹೊತ್ತಿನಲ್ಲಿ ಸಾವಿಗೀಡಾದ ಯುವಕನ ಮೃತದೇಹವನ್ನು ಹೆಚ್ಚಿನ ತಪಾಸಣೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ. ತನ್ನೊಂದಿಗೆ ಅಪಮಾನಕರ ರೀತಿಯಲ್ಲಿ ನಡೆದುಕೊಂಡಿರುವ ಬಗ್ಗೆ ಯುವತಿ ನೀಡಿದ ದೂರಿನ ಮೇರೆಗೆ ಮಹಮ್ಮದ್ ರಫೀಕ್ ವಿರುದ್ಧ ಹಾಗೂ ಯುವಕನ ಅಸಹಜ ಸಾವಿನ ಬಗ್ಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆ ಹಾಗೂ ಇತರೆಡೆಯಿರುವ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
ನಗರದ ಕರಂದಕ್ಕಾಡು ಸನಿಹ ಅಶ್ವಿನಿನಗರದ ಆಸ್ಪತ್ರೆ ವಠಾರದಲ್ಲಿ ತಂಡವೊಂದು ಯುವಕನನ್ನು ಶನಿವಾರ ಹಾಡಹಗಲೇ ಥಳಿಸಿ ಕೊಲೆಗೈದಿತ್ತು. ಚೆಮ್ನಾಡ್ ನಿವಾಸಿ ಹಾಗೂ ದೇಳಿಯಲ್ಲಿ ವಾಸಿಸುತ್ತಿರುವ ಮಹಮ್ಮದ್ ರಫೀಕ್(48)ಕೊಲೆಯಾದ ಯುವಕ. ಖಾಸಗಿ ಆಸ್ಪತ್ರೆಯೊಂದಕ್ಕೆ ಮಗುವಿಗೆ ಚಿಕಿತ್ಸೆಗಾಗಿ ಆಗಮಿಸಿದ ಗೃಹಿಣಿಗೆ ಕಿರುಕುಳ ನೀಡಲೆತ್ನಿಸಿರುವುದನ್ನು ಪ್ರಶ್ನಿಸಿ ಮಹಮ್ಮದ್ ರಫೀಕ್ ಮತ್ತು ತಂಡವೊಂದರ ಮಧ್ಯೆ ವಾಗ್ವಾದ ನಡೆದಿತ್ತು. ಕಿರುಕುಳಕ್ಕೆ ಯತ್ನಿಸಿದ ರಫೀಕ್‍ನನ್ನು ಗ್ರಹಿಣಿ ಪಕ್ಕಕ್ಕೆ ತಳ್ಳಿಹಾಕಿದ್ದರೆನ್ನಲಾಗಿದೆ. ಇದಾದ ಅಲ್ಪ ಹೊತ್ತಿನಲ್ಲಿ ಆಸ್ಪತ್ರೆ ವಠಾರದ ಮೆಡಿಕಲ್ ಶಾಪ್ ಬಳಿಗೆ ಆಗಮಿಸಿದ ತಂಡ ಮಹಮ್ಮದ್ ರಫೀಕ್‍ನನ್ನು ಯದ್ವಾತದ್ವ ಥಳಿಸಿದ್ದರು. ಅಬೋಧಾವಸ್ಥೆಯಲ್ಲಿದ್ದ ಯುವಕನನ್ನು ತಕ್ಷಣ ಸನಿಹದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಥಳಿತದಿಂದ ಸಾವು ಸಂಭವಿಸಿರುವ ಬಗ್ಗೆ ಮರಣೋತ್ತರ ವರದಿಯಿಂದ ಖಚಿತಪಡಿಸಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ಡಿವೈಎಸ್‍ಪಿ ಬಾಲಕೃಷ್ಣನ್‍ನಾಯರ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಆರೋಪಿಗಳ ಪತ್ತೆಕಾರ್ಯದಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆ ಹಾಗೂ ಸ್ಥಳದಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ತಪಾಸಣೆಗೊಳಪಡಿಸಿದ್ದಾರೆ.





