ಕಾಸರಗೋಡು: ಪನತ್ತಡಿ ಪಂಚಾಯಿತಿಯ ಪಾಣತ್ತೂರಿನಲ್ಲಿ ಏಳು ಜನರ ಜೀವ ಅಪಹರಿಸಿದ ಮದುವೆ ದಿಬ್ಬಣ ಸಾಗಾಟದ ಬಸ್ ಅಪಘಾತದಲ್ಲಿ, ಮೊತ್ತಮೊದಲು ರಕ್ಷಣಾಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಲವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ಸ್ಥಳೀಯ ನಿವಾಸಿ ದಾಮೋದರನ್ ಅವರ ಸೇವೆಯನ್ನು ಸರ್ಕಾರ ಅಥವಾ ಸಂಘಟನೆಗಳಾಗಲಿ ಗುರುತಿಸುವ ಕಾರ್ಯ ಇನ್ನೂ ನಡೆದಿಲ್ಲ!
'ಮೊನ್ನೆ ಜನವರಿ 3ರಂದು ಬೆಳಗ್ಗೆ ಸುಮಾರು 11ರ ಸಮಯ. ಪಾಣತ್ತೂರಿನಿಂದ ಸುಳ್ಯಕ್ಕೆ ತೆರಳುವ ಖಾಸಗಿ ಬಸ್ಸೊಂದರಲ್ಲಿ ಬಂದಿಳಿದು ಮನೆಗೆ ತೆರಳಿ ಬಟ್ಟೆ ಬದಲಾಯಿಸುತ್ತಿದ್ದಂತೆ ಭಾರಿ ಸ್ಪೋಟದಂತಹ ಶಬ್ದ ಕೇಳಿ ಬಂದಿದೆ. ಅತ್ತ ಧಾವಿಸಿದಾಗ ಭಾರಿ ದುರ್ಘಟನೆಯೊಂದು ನಡೆದು ಬಿಟ್ಟಿದೆ. ಮದುವೆ ದಿಬ್ಬಣದ ಜನರಿಂದ ತುಂಬಿದ್ದ ಬಸ್ ಮಗುಚಿಬಿದ್ದು, ಮಹಿಳೆಯರು, ಮಕ್ಕಳ ಆಕ್ರಂದನ, ಚೀರಾಟ, ನರಳುವಿಕೆಯ ಸದ್ದು ಯಾವ ಕಲ್ಲು ಹೃದಯವನ್ನೂ ಕಲಕುವಂತಿತ್ತು'ಎಂಬುದಾಗಿ ಅಂದಿನ ಘಟನೆಯನ್ನು ಕಣ್ಣಿಗೆ ರಾಚುವಂತೆ ವಿವರಿಸುತ್ತಿದ್ದ ಕೆ.ಬಿ ದಾಮೋದರ್ ಅವರ ಮನದಲ್ಲಿದ್ದ ಅಂದಿನ ಭಂiÀiದ ವಾತಾವರಣ ದೂರಾಗಿರಲಿಲ್ಲ.
ಘಟನಾಸ್ಥಳಕ್ಕೆ ಧಾವಿಸಿ ಬಂದಿದ್ದ ದಾಮೋದರ್ ಅವರ ಕಣ್ಣೆದುರು ಮೂರು ಮಂದಿ ಶವವಾಗಿದ್ದರು. ಬಸ್ಸಿನ ಸಂದಿಯಿಂದ ಒಳಗೆ ನುಸುಳಿ ಹೋದ ದಾಮೋದರ್ ಮೂವತ್ತಕ್ಕೂ ಹೆಚ್ಚು ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸಿಕೊಡುವಲ್ಲಿ ನೆರವಾಗಿದ್ದರು. ಇತರ ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. 25ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದರು. ದಾಮೋದರನ್‍ಹಾಗೂ ಇತರರ ಸಕಾಲಿಕ ಕಾರ್ಯಾಚರಣೆಯಿಂದ ಹಲವು ಮಂದಿಯ ಜೀವ ಉಳಿದುಕೊಂಡಿತ್ತು.
ಅಪಘಾತ ನಡೆದ ಪಾಣತ್ತೂರಿನ ಪೆರಿಯಾರದ ಸ್ಥಳದಲ್ಲಿ ನೀರವ ಮೌನ ಆವರಿಸಿದೆ. ಹಾನಿಗೀಡಾದ ಮನೆ ಹಾಗೂ ಸಮುದಾಯ ಭವನ ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿದೆ. ಉತ್ತಮ ಕೃಷಿಕರಾಗಿರುವ ದಾಮೋದರನ್ ಅವರ ಸೇವಾ ಮನೋಭಾವ ನಾಡಿನ ಜನತೆಯ ಪ್ರಶಂಸೆಗೆ ಪಾತ್ರವಾಗಿದ್ದರೂ, ಇವರ ಸೇವೆಯನ್ನು ಸರ್ಕಾರಿ ಮಟ್ಟದಲ್ಲಿ ಗುರುತಿಸುವ ಕೆಲಸವೂ ನಡೆಯಬೇಕಾಗಿದೆ.
ಅಭಿಮತ:
ಅಪಘಾತ ನಾಡಿನ ಜನತೆಯನ್ನು ತಲ್ಲಣಗೊಳಿಸಿದೆ. ಭಾರಿ ಇಳಿಜಾರಿನಿಂದ ಕೂಡಿದ ಈ ರಸ್ತೆಯಲ್ಲಿ ಅಪಘಾತ ಮರುಕಳಿಸದಂತೆ ನೋಡಿಕೊಳ್ಳುವುದು ಉಭಯ ಸರ್ಕಾರದ ಕರ್ತವ್ಯವಾಗಬೇಕಾಗಿದೆ. ಸಮಾನ್ಯವಾಗಿ ಅಪಘಾತ ನಡೆದ ತಕ್ಷಣ ಏನು ಮಾಡಬೇಕೆಂದು ತೋಚದಾಗುವುದು ಸಾಮಾನ್ಯ. ಎದೆಗುಂದದೆ, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒಂದಷ್ಟು ಜೀವ ಉಳಿಸುವ ಕೆಲಸ ನಡೆಸಬಹುದಾಗಿದೆ.
ಕೆ.ಬಿ ದಾಮೋದರನ್, ಸ್ಥಳೀಯ ನಿವಾಸಿ
ಪರಿಹಾರ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ನಾಗರಿಕ



