ಬದಿಯಡ್ಕ: ಗಡಿನಾಡು ಕಾಸರಗೋಡಲ್ಲಿ ಯಕ್ಷಗಾನ ಕ್ಷೇತ್ರದ ಸಮಗ್ರ ಏಳ್ಗೆಯಾಗಿ ಶ್ರೀಕ್ಷೇತ್ರ ಕೊಲ್ಲಂಗಾನ, ಇಲ್ಲಿಯ ಮೇಳ ನೀಡುತ್ತಿರುವ ಕೊಡುಗೆ ಮಹತ್ತರವಾದುದು. ಕಲೆ-ಕಲಾವಿದರ ಬೆಳವಣಿಗೆ, ಶ್ರೇಯೋಭಿವೃದ್ದಿಗೆ ತನ್ನದೇ ಕೊಡುಗೆಗಳ ಮೂಲಕ ಆಸರೆ-ಆಶ್ರಯಗಳಿಂದ ಸ್ತುತ್ಯರ್ಹವಾಗಿದೆ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಅವರು ತಿಳಿಸಿದರು.
ಶ್ರೀಕ್ಷೇತ್ರ ಕೊಲ್ಲಂಗಾನ ಶ್ರೀದುರ್ಗಾಪರಮೇಶ್ವರಿ ಮೇಳದ ನೇತೃತ್ವದಲ್ಲಿ ಶ್ರೀನಿಲಯ ಕೊಲ್ಲಂಗಾನದಲ್ಲಿ ಇತ್ತೀಚೆಗೆ ಆಯೋಜಿಸಲಾದ ದಿ.ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣೆ ಹಾಗೂ ಯಕ್ಷಪಂಚಕ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸವಾಲಿನ ಸಂದರ್ಭದಲ್ಲೂ ಐದು ದಿನಗಳ ಯಕ್ಷಗಾನ ಕಲಾಸೇವೆಯನ್ನು ಆಯೋಜಿಸುವ ಮೂಲಕ ಕಲಾಪೋಷಣೆಗೆ ನೀಡುತ್ತಿರುವ ಮಹತ್ವಿಕೆಯು ಮಾದರಿಯಾದುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಹಿರಿಯ ಕಲಾವಿದ, ಸಂಘಟಕ ರವಿ ಅಲೆವೂರಾಯ ವರ್ಕಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಆದರ್ಶಗಳನ್ನು ಬೆಂಬತ್ತಿ ಸಾಗಿದಾಗ ಕನಸು ಸಾಕಾರಗೊಳ್ಳುತ್ತದೆ. ಪ್ರತಿಯೊಂದು ವ್ಯಕ್ತಿಯ ವ್ಯಕ್ತಿತ್ವ ನಿರೂಪಿತಗೊಳ್ಳಬೇಕಾದರೆ ಹಿರಿಯರ ಆದರ್ಶ, ಗುರಿಯೆಡೆಗಿನ ಲಕ್ಷ್ಯ ಮತ್ತು ಆ ಲಕ್ಷ್ಯ ಪ್ರಾಪ್ತಿಗೆ ಫಲಾಪೇಕ್ಷೆ ಇಲ್ಲದೆ ನಾವು ನಡೆಸುವ ತ್ಯಾಗಗಳು ಪ್ರಮುಖ ಕಾರಣಗಳಾಗುತ್ತದೆ. ಕೊಲ್ಲಂಗಾನ ಮೇಳ ಸಾಗಿಬಂದಿರುವ ಹಾದಿ ಅಂತಹ ಸಾಧನೆಗಳಿಂದ ನಿರೂಪಿತವಾದವುಗಳು ಎಂದು ತಿಳಿಸಿದರು.
ಕಲಾವಿದರಾದ ಶೇಖರ ಮಣಿಯಾಣಿ ಸುಳ್ಯ, ಜಯರಾಮ ಪಾಟಾಳಿ ಪಡುಮಲೆ, ವಾಂತಿಚ್ಚಾಲ್ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು. ಮೇಳದ ವ್ಯವಸ್ಥಾಪಕ, ಶ್ರೀನಿಲಯ ಕೊಲ್ಲಂಗಾನದ ಬ್ರಹ್ಮಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ದೀಕ್ಷಾ ಕೊಲ್ಲಂಗಾನ ಸ್ವಾಗತಿಸಿ, ಶರಣ್ಯ ಶ್ರೀನಿವಾಸ್ ಪುತ್ತೂರು ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೊಲ್ಲಂಗಾನ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವಾವರಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು.




