ಕಾಸರಗೋಡು: ವಿಧಾನಸಭೆ ಚುನಾವಣೆ ಅಂಗವಾಗಿ ಕಾಸರಗೋಡುಜಿಲ್ಲೆಯಲ್ಲಿ ವೆಚ್ಚ ನಿರೀಕ್ಷಿಸುವ ನಿಟ್ಟಿನಲ್ಲಿ 5 ಕ್ಷಿಪ್ರದಳ(ಫ್ಲಯಿಂಗ್ ಸ್ಕ್ವಾಡ್) ಗಳನ್ನು ರಚಿಸಲಾಗಿದೆ. ಸೀನಿಯರ್ ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟರ್ ಅವರ ನೇತೃತ್ವದಲ್ಲಿರುವ ದಳದಲ್ಲಿ ಒಬ್ಬ ಹಿರಿಯ ಪೋಲೀಸ್ ಅಧಿಕಾರಿ, ಮೂರು-ನಾಲ್ಕು ಸಶಸ್ತ್ರ ಪೋಲೀಸರು, ವೀಡಿಯೋಗ್ರಾಫರ್ ಹೀಗೆ 5 ಮಂದಿ ಸದಸ್ಯರಿರುವರು.
ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಕಾಸರಗೋಡು ಎಸ್.ಜಿ.ಎಸ್.ಟಿ. ಜಂಟಿ ಕಮೀಷನರ್ ಕಚೇರಿಯ ಸ್ಟೇಟ್ ಟಾಕ್ಸ್ ಅಧಿಕಾರಿ ಮೈಲಾ ನಾಯ್ಕ್ ದಳದ ನೇತೃತ್ವ ವಹಿಸುವರು. ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ ಎಸ್.ಜಿ.ಎಸ್.ಟಿ. ಸ್ಟೇಟ್ ಟಾಕ್ಸ್ ಅಧಿಕಾರಿ ಕೆ.ರಾಜೇಂದ್ರನ್, ಉದುಮಾ ವಿಧಾನಸಭೆ ಕ್ಷೇತ್ರದಲ್ಲಿ ಹೊಸದುರ್ಗ ಸ್ಟೇಟ್ ಟಾಕ್ಸ್ ಕಚೇರಿಯ ಅಧಿಕಾರಿ ಪಿ.ವಿ.ರತ್ನಾಕರನ್, ಕಾಞಂಗಾಡ್ ವಿಧಾನಸಭೆ ಕ್ಷೇತ್ರದಲ್ಲಿ ಹೊಸದುರ್ಗ ಸ್ಟೇಟ್ ಟಾಕ್ಸ್ ಕಚೇರಿಯ ಅಧಿಕಾರಿ ವಿ.ಸಜಿತ್ ಕುಮಾರ್, ತ್ರಿಕರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಕಾಸರಗೋಡು ರೀಸರ್ವೇ ಕಚೇರಿಯ ಟೆಕ್ನಿಕಲ್ ಅಸಿಸ್ಟೆಂಟ್ ತಂಬಾನ್ ದಳಗಳಿಗೆ ನೇತೃತ್ವ ವಹಿಸುವರು.
ಚುನಾವಣೆಯ ದಿನಾಂಕ ಘೋಷಣೆಯಿಂದ ಅಕ್ರಮ ಹಣ ವ್ಯವಹಾರ, ಮದ್ಯ ವಿತರಣೆ, ಇನ್ನಿತರ ಮತದಾರರಿಗೆ ಆಮಿಷ ನೀಡುವ ಕ್ರಮಗಳನ್ನು ದಳಗಳು ನಿರಕ್ಷಿಸಲಿವೆ. ಇವರಿಗೆ ಮಾ.1 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತರಬೇತಿ ನಡೆಯಲಿದೆ.



