ನವದೆಹಲಿ: ದೇಶದ ಕೆಲ ರಾಜ್ಯಗಳಲ್ಲಿನ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ದೇಶದ ಒಟ್ಟಾರೆ ಸೋಂಕಿತರ ಪೈಕಿ ಕೇವಲ 6 ರಾಜ್ಯಗಳಲ್ಲಿ ಶೇ.86ರಷ್ಟು ಸೋಂಕಿತರು ಇದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಆರೋಗ್ಯ ಇಲಾಖೆ ನೀಡಿದೆ. ಇದೇ ಕಾರಣಕ್ಕಾಗಿ ಇಂದು ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ಏರ್ಪಡಿಸಲಾಯಿತು.
ಈ ಪೈಕಿ ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕೋವಿಡ್ ಆರ್ಭಟ ಗಣನೀಯವಾಗಿ ಉಲ್ಬಣಗೊಳ್ಳುತ್ತಿವೆ. ಭಾರತದಲ್ಲಿ ಒಟ್ಟು 1,59,590 ಸಕ್ರಿಯ ಪ್ರಕರಣಗಳಿದ್ದು, ಒಟ್ಟು ಸೋಂಕು ಪ್ರಮಾಣ ಶೇ 1.44ಕ್ಕೇರಿದೆ. ಆರು ರಾಜ್ಯಗಳು ಅಂದರೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಮತ್ತು ಗುಜರಾತ್ ನಲ್ಲಿ 24 ಗಂಟೆಗಳ ಅವಧಿಯಲ್ಲಿ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 8,333 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಅದರ ನಂತರ ಕೇರಳದಲ್ಲಿ 3,671 ಹೊಸ ಪ್ರಕರಣಗಳು ಮತ್ತು ಪಂಜಾಬ್‌ನಲ್ಲಿ 622 ಹೊಸ ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 16,488 ಹೊಸ ಪ್ರಕರಣಗಳು ದಾಖಲಾಗಿದ್ದು. ಈ ಪೈಕಿ ಆರು ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಪಾಲೇ ಶೇ 85.75 ರಷ್ಟಾಗಿವೆ. 8 ರಾಜ್ಯಗಳಲ್ಲಿ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ ಮೇಲ್ಮುಖವಾಗಿ ಪಥದಲ್ಲಿ ಸಾಗಿದೆ. ಕಳೆದ ಎರಡು ವಾರಗಳಲ್ಲಿ, ಕೇರಳದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗರಿಷ್ಠ ಕುಸಿತ ತೋರಿಸಿದ್ದು, ಫೆಬ್ರವರಿ 14 ರಂದು 63,847ರಷ್ಟಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 51,679 ಕ್ಕೆ ಕುಸಿದಿದೆ. ಮಹಾರಾಷ್ಟ್ರದಲ್ಲಿ ಇದೇ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 34,449 ರಿಂದ ಪ್ರಸ್ತುತ 68,810 ಕ್ಕೆ ಏರಿದೆ.
ಶುಕ್ರವಾರ ಒಂದೇ ದಿನ ದೇಶದಲ್ಲಿ 12,771 ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಒಟ್ಟಾರೆ ಚೇತರಿಕೆ ಪ್ರಮಾಣ 1,07,63,451ಕ್ಕೆ ಏರಿಕೆಯಾಗಿದೆ. ಭಾರತದ ಕೋವಿಡ್-19 ಚೇತರಿಕೆ ಪ್ರಮಾಣವು ಶೇಕಡಾ 97.17ಕ್ಕೆ ಏರಿಕೆಯಾಗಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಸಚಿವಾಲಯ ಒತ್ತಿಹೇಳಿದೆ.
ಲಸಿಕೆ ವಿತರಣೆಗೆ ವೇಗ:
ದೇಶದಲ್ಲಿ ಕೋವಿಡ್ ಲಸಿಕೆ ವಿತರಣೆಯ ವೇಗವನ್ನೂ ಹೆಚ್ಚಳ ಮಾಡಲಾಗಿದ್ದು, ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 1,42,42,547 ಮಂದಿಗೆ ಲಸಿಕೆ ನೀಡಲಾಗಿದ್ದು, ನಿನ್ನೆ ಒಂದೇ ದಿನ 2,92,312 ಮಂದಿಗೆ ಲಸಿಕೆ ವಿತರಣೆ ಮಾಡಲಾಗಿದೆ. ಮೊದಲ ಡೋಸ್ ನೀಡಲಾದ 66,68,974 ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯು), ಎಚ್‌ಸಿಡಬ್ಲ್ಯೂ ಕಾರ್ಯಕರ್ತರಿಗೆ 24,53,878 ಎರಡನೇ ಡೋಸ್ ಮತ್ತು 51,19,695 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದೆ. ಮೊದಲ ಡೋಸ್ ಪಡೆದ 28 ದಿನಗಳ ನಂತರ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಫೆಬ್ರವರಿ 13 ರಂದು 2ನೇ ಹಂತದ ವ್ಯಾಕ್ಸಿನೇಷನ್ ನೀಡಿಕೆ ಆರಂಭವಾಗಿತ್ತು.





