ಕಾಸರಗೋಡು: ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಸರಗೋಡು ಜಿಲ್ಲಾ ಕಚೇರಿಯ ನೂತನ ಕಟ್ಟಡ ಇಂದು ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಟ್ಟಡದ ಉದ್ಘಾಟನೆ ನಡೆಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದ್ದೀನ್, ಕೆ.ಕುಂಞÂ್ಞ ರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿರುವರು. ಇಲಾಖೆ ನಿರ್ದೇಶಕ ಎಸ್.ಹರಿಕಿಶೋರ್ ಪ್ರಧಾನ ಭಾಷಣ ಮಾಡುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮ ಕಾರ್ಯಕರ್ತರು ಉಪಸ್ಥಿತರಿರುವರು.
1.76 ಕೋಟಿ ರೂ. ವೆಚ್ಚದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿಧಿ ಬಳಸಿ ಲೋಕೋಪಯೋಗಿ ಇಲಾಖೆ ಈ ಕಟ್ಟಡ ನಿರ್ಮಿಸಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಖೆಗಾಗಿ ಮಾತ್ರ ಇಷ್ಟು ದೊಡ್ಡ ಕಟ್ಟಡ ನಿರ್ಮಾಣಗೊಂಡಿದೆ. ಬೃಹತ್ ಮಾಹಿತಿ ಹಬ್ಬ್ ಆಗಿ ಇದನ್ನು ಪರಿವರ್ತಿಸುವ ಉದ್ದೇಶವಿದ್ದು, ಡಿಜಿಟಲ್ ವೀಡಿಯೋ ಲೈಬ್ರರಿ, ಶಬ್ದ ನಿಯಂತ್ರಣ ಸೌಲಭ್ಯವಿರುವ ಪಿ.ಆರ್.ಛೇಂಬರ್, ಕನ್ನಡ ಮತ್ತು ಮಲೆಯಾಳಂ ವಿಭಾಗಗಳಿಗೆ ಪ್ರತ್ಯೇಕ ಕೊಠಡಿಗಳು, ಮೊಬೈಲ್ ಜರ್ನಲಿಸಂ ಸ್ಟುಡಿಯೋ, ಪ್ರಿಸಂ ವಿಭಾಗದ ತಾಂತ್ರಿಕ ವಿಭಾಗ ಇತ್ಯಾದಿಗಳು ಈ ಕಟ್ಟಡದಲ್ಲಿವೆ. 2019 ಫೆ.25ರಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಈ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ್ದರು. ಮಹಿಳಾ, ಶಿಶು ಸೌಹಾರ್ದ, ವಿಶೇಷ ಚೇತನ ಸೌಹಾರ್ದ, ಹರಿತ ಕಚೇರಿ ಇದಾಗಿದೆ.




