ಕೊಚ್ಚಿ: ಉತ್ತರ ಪ್ರದೇಶ ಹತ್ರಾಸ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕ್ಯಾಂಪಸ್ ಫ್ರಂಟ್ ಮುಖಂಡ ರೌಫ್ ಶೆರೀಫ್‍ನನ್ನು ಯುಪಿ ಪೊಲೀಸರು ಕೊಚ್ಚಿಯಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಮಥುರಾ ನ್ಯಾಯಾಲಯದ ಪ್ರೊಡಕ್ಷನ್ ವಾರಂಟ್ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ರೌಫ್ ಬಂಧನಕ್ಕಾಗಿ ಕೇರಳಕ್ಕೆ ಆಗಮಿಸಿದ್ದರು.
ಈ ಹಿಂದೆ ಇ.ಡಿ ಅಧಿಕಾರಿಗಳಿಂದ ಬಂಧಿತನಾಗಿದ್ದ ರೌಫ್‍ನನ್ನು ಶುಕ್ರವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. ಕಾಕನಾಡ್ ಜಿಲ್ಲಾ ಕಾರಾಗೃಹಕ್ಕೆ ಆಗಮಿಸಿದ ಪೊಲೀಸರು, ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಣ್ಣೂರಿನ ನಾರತ್‍ನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿ.ಎಫ್.ಐ)ಆಯೋಜಿಸಿದ್ದ ಆಯುಧ ತರಬೇತಿಗೆ ಸಂಬಂಧಿಸಿ ಈತನ ವಿರುದ್ಧ ಎನ್‍ಐಎ ಕೇಸು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಕಪ್ಪುಹಣ ವ್ಯಾಪಕ ಬಳಕೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಇ.ಡಿ ದೆಹಲಿ ಘಟಕ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿ 2020 ಡಿಸೆಂಬರ್ ತಿಂಗಳಲ್ಲಿ ರೌಫ್‍ನನ್ನು ಬಂಧಿಸಲಾಗಿತ್ತು. ಇದಾದ ನಂತರ ಯುಪಿ ಪೊಲೀಸರು ರೌಫ್ ವಿರುದ್ಧ ಗಲಭೆ ಯತ್ನಕ್ಕೆ ಸಂಬಂಧಿಸಿ ಕೇಸು ದಾಖಲಿಸಿರುವ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.
ಹತ್ರಾಸ್ ಗಲಭೆ ಪ್ರದೇಶಕ್ಕೆ ಭೇಟಿ ನೀಡಿದ್ದ ಯುಪಿ ನಿವಾಸಿಗಳಾದ ಅತಿಕೂರ್ ರಹಮಾನ್, ಮಸೂದ್ ಅಹಮ್ಮದ್, ಆಲಂ ಹಾಗೂ ಮಲಯಾಳಿ ಪತ್ರಕರ್ತ ಸಿದ್ದಿಕ್ ಕಾಪ್ಪನ್ ಎಂಬವರನ್ನು ಯುಪಿ ಪೊಲೀಸರು ಈ ಹಿಂದೆ ಬಂಧಿಸಿದ್ದರು.





