HEALTH TIPS

ಸವಾಕ್ ಜಿಲ್ಲಾ ಸಮಾವೇಶ-ರಚನಾತ್ಮಕ ಚಟುವಟಿಕೆಗಳ ಮೂಲಕ ನ್ಯಾಯಯುತ ಸವಲತ್ತುಗಳನ್ನು ಪಡೆಯುವಲ್ಲಿ ಸಂಘಟನೆ ಸಕ್ರಿಯ-ಸುದರ್ಶನ ವರ್ಣ

     

     ಕಾಸರಗೋಡು:  ಸಾಮಾಜಿಕ ಕಳಕಳಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕಲಾವಿದರು ಸಮಾಜದ ಚಿಕಿತ್ಸಕರಾಗಿದ್ದು ಸಂಘಟನಾತ್ಮಕವಾಗಿ ಇಂದು ರಾಜ್ಯಾದ್ಯಂತ ಬಲಯುತರಾಗಿ ರೂಪುಗೊಳ್ಳುವುದರ ಹಿಂದೆ ಸತತ ಪರಿಶ್ರಮ, ಹೋರಾಟಗಳಿವೆ ಎಂದು ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ(ಸವಾಕ್) ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ ವರ್ಣ ಅವರು ತಿಳಿಸಿದರು.  

           ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್(ಸವಾಕ್) ಕಾಸರಗೋಡು ಜಿಲ್ಲಾ ಸಮಾವೇಶವನ್ನು ಭಾನುವಾರ ಕಾಸರಗೋಡು ಮುನ್ಸಿಫಲ್ ಕಾನ್ಪರೆನ್ಸ್ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.


      ವೈಯುಕ್ತಿವಾಗಿ ದಿನನಿತ್ಯ ನಾವು ಎದುರಿಸುವ ಸಂಕಷ್ಟಗಳು ಅಧೀರಗೊಳಿಸುತ್ತದೆ. ಇದರಿಂದ ನಮ್ಮ ಪ್ರತಿಭೆ, ನಾವು ತೊಡಗಿಸಿಕೊಂಡಿರುವ ಕ್ಷೇತ್ರದಲ್ಲಿ ವ್ಯವಸ್ಥಿತ ಕಾರ್ಯತಂತ್ರಗಳ ಸವಾಲುಗಳಿಗೆ ನ್ಯಾಯಯುತ ಭದ್ರತೆಯನ್ನು ಕಲ್ಪಿಸಿಕೊಡುವಲ್ಲಿ ಸವಾಕ್ ಸಮಗ್ರ ಯೋಜನೆಗಳೊಂದಿಗೆ ಕಾರ್ಯವೆಸಗುತ್ತಿರುವುದು ಜನಮನ್ನಣೆಗೆ ಪಾತ್ರವಾಗಿದೆ ಎಂದು ಅವರು ಈ ಸಂದರ್ಭ ತಿಳಿಸಿದರು. ರಾಜ್ಯಮಟ್ಟದಲ್ಲಿ ಕಾಸರಗೋಡು ಜಿಲ್ಲಾ ಘಟಕ ಅತ್ಯಧಿಕ ಸದಸ್ಯತ್ವ, ವೈವಿಧ್ಯಮಯ ಕಾರ್ಯಚಟುವಟಿಕೆ, ಅಸಂಘಟಿತ ಕಲಾವಿದರ ಬಾಳಿನ ಬೆಳಕಾಗಿ ಅಪೂರ್ವ ಯಶಸ್ಸಿನ ಹಾದಿಯಲ್ಲಿದೆ ಎಂದು ಅವರು ಶ್ಲಾಘಿಸಿದರು. 

       ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸವಾಕ್ ರಾಜ್ಯ ಸಂಘಟನಾ ಕಾರ್ಯದರ್ಶಿ ವಿನೋದ್ ಕುಮಾರ್ ಅಚುಂಬಿತ ಅವರು ಸಂಘಟನಾ ಚಟುವಟಿಕೆಗಳ ಬಗ್ಗೆ ಮಾತನಾಡಿ, ಕಳೆದ 19 ವರ್ಷಗಳಿಂದ ವ್ಯವಸ್ಥಿತ ಕಾರ್ಯಚಟುವಟಿಕೆಗಳ ಮೂಲಕ ಸಂಘಟನೆ ಸಾಗಿಬಂದ ಮಾರ್ಗದ ಬಗ್ಗೆ ತಿಳಿಸಿದರು. ಅಶಕ್ತ ಕಲಾವಿದರಿಗೆ ರೂಪಿಸಲಾದ ಪಿಂಚಣಿ ಮೊತ್ತ ಈ ಹಿಂದೆ ಒಂದು ಸಾವಿರ ರೂ. ಮಾತ್ರವಿದ್ದುದು ಇಂದು ಮೂರು ಸಾವಿರ ರೂ.ಗಳಿಗೆ ಸರ್ಕಾರ ಹೆಚ್ಚಳಗೊಳಿಸಿರುವುದು ಸವಾಕ್ ನ ನಿರಂತರ ಒತ್ತಡದಿಂದಾಗಿದ್ದು, ತಿಂಗಳಿಗೆ ಐದು ಸಾವಿರ ರೂ.ಪಿಂಚಣಿ ಮೊತ್ತ ಏರಿಕೆಗೊಳಿಸುವ ಒತ್ತಡವನ್ನು ಸಂಬಂಧಪಟ್ಟವರಿಗೆ ತಲಪಿಸಲಾಗಿದೆ ಎಂದರು. 

      ಸವಾಕ್ ಜಿಲ್ಲಾ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ವಿ.ವಿ.ವಿಜಯನ್, ಜಿಲ್ಲೆಯ ವಿವಿಧ ಬ್ಲಾಕ್ ಗಳ ಅಧ್ಯಕ್ಷರುಗಳಾದ ಮಧುಸೂದನ ಬಲ್ಲಾಳ್, ಭಾರತಿ ಬಾಬು, ಸುರೇಶ್ ಬೇಕಲ್, ಜೀನ್ ಲವೀನಾ ಮೊಂತೇರೊ ಮಂಜೇಶ್ವರ, ದಯಾ ಪಿಲಿಕುಂಜೆ, ಗಂಗಾಧರ ಮಾರಾರ್, ವೇಣು ಪಯ್ಯನ್ನೂರು ಮೊದಲಾದವರು ಉಪಸ್ಥಿತರಿದ್ದರು.

       ಈ ಸಂದರ್ಭ ಸವಾಕ್ ಪ್ರತಿವರ್ಷ ಕೊಡಮಾಡುವ ಐವರು ಸಾಧಕ ಕಲಾವಿದರಿಗಿರುವ ಕಲಾರತ್ನ ಪುರಸ್ಕಾರ ಪ್ರದಾನ ನಡೆಯಿತು. ದಿವಾಣ ಶಿವಶಂಕರ ಭಟ್(ಯಕ್ಷಗಾನ), ಸುರೇಶ್ ಬೇಕಲ್(ನಾಟಕ), ಮಧುಸೂದನ ಬಲ್ಲಾಳ್ (ನಾಟಕ), ನರಸಿಂಹ ಬಲ್ಲಾಳ್ (ಯಕ್ಷಗಾನ), ನಾರಾಯಣನ್ ಕಾವುಂಗಾಲ್(ಪೂಕ್ಕಾವಡಿ ಅಮ್ಮನ್ ಕುಡಂ ಕಲಾವಿದ)ಎಂಬವರಿಗೆ ಕಲಾರತ್ನ ಪುರಸ್ಕಾರ ಪ್ರದಾನಗೈಯ್ಯಲಾಯಿತು. ಇತರ ಸಾಧಕ ಕಲಾವಿದರನ್ನೂ ಗೌರವಿಸಲಾಯಿತು. ಸವಾಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಬಳಿಕ ಸಂಘಟನಾ ವರದಿ ಮಂಡನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries