ನವದೆಹಲಿ: ಕೆಲವು ಖಾತೆಗಳನ್ನು ನಿರ್ಬಂಧಿಸಬೇಕೆಂಬ ಕೇಂದ್ರ ಸರ್ಕಾರದ ಆದೇಶವನ್ನು ಟ್ವಿಟ್ಟರ್ ಪಾಲಿಸದ ಕಾರಣ ಸರ್ಕಾರ ಮತ್ತು ಸಾಮಾಜಿಕ ಜಾಲತಾಣ ದಿಗ್ಗಜ ಸಂಸ್ಥೆಗಳ ನಡುವಿನ ಸಂಘರ್ಷ ತಿವ್ರಗೊಳ್ಳುತ್ತಿದೆ. ಈ ನಡುವೆ ಕೇಂದ್ರ ಸರ್ಕಾರವು ಎಲ್ಲ ಸಾಮಾಜಿಕ ಮಾಧ್ಯಮ, ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಸುದ್ದಿ ಸಂಬಂಧಿ ವೆಬ್‌ಸೈಟ್‌ಗಳನ್ನು ನಿಯಂತ್ರಿಸುವ ನಿಯಮಗಳ ಕರಡನ್ನು ಸಿದ್ಧಪಡಿಸಿದೆ.
ಕಠಿಣ ನೀತಿ ಸಂಹಿತೆ ಮತ್ತು ದೈನಂದಿನ ಅನುಸರಣೆಯ ವರದಿ ನೀಡುವುದು ಸೇರಿದಂತೆ ಸ್ವಯಂ ನಿಯಂತ್ರಣಾ ವ್ಯವಸ್ಥೆಯನ್ನು ಈ ನಿಯಮಗಳು ರೂಪಿಸಲಿವೆ ಎಂದು ವರದಿ ತಿಳಿಸಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಲು ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಬರುವ ದೂರುಗಳಿಗೆ ಸ್ಪಂದಿಸಲು ಮುಖ್ಯ ಅನುಸರಣಾ ಅಧಿಕಾರಿಯನ್ನು ನೇಮಿಸಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಈ ಅಧಿಕಾರಿಯು ನಿಯಮ ಅನುಸರಣೆಯ ಕುರಿತು ಸಾಮಾನ್ಯ ವರದಿ ಸಹ ಸಲ್ಲಿಸಲಿದ್ದಾರೆ. ಕುಂದುಕೊರತೆ ವಿಚಾರಣೆಯ ಸ್ವಯಂಚಾಲಿತ ಪೋರ್ಟಲ್ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಕೂಡ ಇರಲಿದೆ.
ಮೇಲ್ವಿಚಾರಣಾ ವ್ಯವಸ್ಥೆಯನ್ನು ಸರ್ಕಾರವೇ ಅಭಿವೃದ್ಧಿಪಡಿಸಲಿದೆ. ಇದು ಕಂಪೆನಿಗಳು ಮತ್ತು ಸ್ವಯಂ ನಿಯಂತ್ರಣ ಸಂಸ್ಥೆಗಳು ನೀತಿ ಸಂಹಿತೆಯ ಪಾಲನೆಗೆ ಬದ್ಧವಾಗಿರುವಂತೆ ಸಂಯೋಜನೆ ನಡೆಸಲಿದೆ ಎಂದು ವರದಿ ತಿಳಿಸಿದೆ.
ನಿಯಮ ಪಾಲಿಸದವರಿಗೆ ಶಿಕ್ಷೆ ವಿಧಿಸುವುದರ ಬಗ್ಗೆ ಕರಡಿನಲ್ಲಿ ಉಲ್ಲೇಖಿಸಿಲ್ಲ. ಆದರೆ ಆಕ್ಷೇಪಾರ್ಹ ಅಂಶಗಳನ್ನು 36 ಗಂಟೆಗಳ ಒಳಗೆ ತೆಗೆದುಹಾಕಬೇಕು ಎಂದು ಸೂಚಿಸಲಾಗಿದೆ. ತುರ್ತು ಸಂದರ್ಭವಿದ್ದರೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗೆ ಇರಲಿದೆ. ಅವರು ಸಮಿತಿ ಎದುರು 48 ಗಂಟೆಯೊಳಗೆ ಸಲ್ಲಿಸಬಹುದು ಎಂದು ಹೇಳಿದೆ.





