HEALTH TIPS

ನಿರಂತರ ಸಂತೋಷವೇ ಆರೋಗ್ಯ

           ಸೃಷ್ಟಿಯ ವಿಕಾಸ ಕ್ರಿಯೆಯ ಅಂತಿಮಹಂತದ ಅತ್ಯಂತ ವಿಕಸಿತ ಜೀವಿ ಇಂದಿನ ಮನುಷ್ಯ. ಹಾಗಾಗಿ ಮನುಷ್ಯನಲ್ಲಿ ಸೃಷ್ಟಿಯಲ್ಲಿನ ಎಲ್ಲವುಗಳ ಮಾಹಿತಿಗಳಿದ್ದು, ಅವನು ವಿಶ್ವರೂಪಿಯಾಗಿದ್ದಾನೆ. ಸೃಷ್ಟಿಯಲ್ಲಿ ಜರುಗುವ ಎಲ್ಲ ಕ್ರಿಯೆಗಳೂ ಅತೀತ ಶಕ್ತಿಯೊಂದರಿಂದ ನಿಯಂತ್ರಿಸಲ್ಪಟ್ಟ ಪೂರ್ವನಿಯೋಜಿತ ಕ್ರಿಯೆಗಳಾಗಿದ್ದು, ಅವೆಲ್ಲವುಗಳೂ ಮನುಷ್ಯನ ಪೂರ್ವನಿಗದಿತ ಕ್ರಿಯೆಗಳೊಡನೆ ಜೋಡಿತವಾಗಿರುವುದನ್ನು ವೈಜ್ಞಾನಿಕವಾಗಿ ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುತ್ತದೆ.


 

       ಮನುಷ್ಯನು ಸೃಷ್ಟಿಯ ನಿಯಂತ್ರಣದಲ್ಲಿರುವ ದೇಹ, ಮನಸ್ಸು ಮತ್ತು ಆತ್ಮಗಳನ್ನೊಳಗೊಂಡ ಆಧ್ಯಾತ್ಮಿಕ ಜೀವಿಯಾಗಿದ್ದಾನೆ. ಮನುಷ್ಯನ ದೇಹ ಪೂರ್ವಜರ ವಂಶವಾಹಿಗಳಿಗನುಗುಣವಾಗಿ ದತ್ತವಾದ ಮತ್ತು ಪರಿಸರದ ಆಹಾರ ಇತ್ಯಾದಿಗಳಿಂದ ಉತ್ಪತ್ತಿಯಾಗುವ ಜೀವಕೋಶಗಳಿಂದ ರಚಿತವಾಗಿದೆ. ಇವುಗಳ ಸಹಜ ಕಾರ್ಯ ಅವನ ಆರೋಗ್ಯಕ್ಕೆ ಅತಿಮುಖ್ಯ. ಮನುಷ್ಯನ ಮನಸ್ಸು ಇಡೀ ಸೃಷ್ಟಿಯಲ್ಲಿಯೇ ಅತ್ಯುನ್ನತಮಟ್ಟದ ವಿಕಸಿತವಾದ ರೂಪರಹಿತ ಅಂಗಾಂಗವಾಗಿ ಮಿದುಳಿನೊಳಗಿದೆ. ಆದುವೇ ದೇಹದ ಎಲ್ಲ ಜೀವಕೋಶಗಳ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಮನಸ್ಸು ಚಂಚಲಶೀಲವಾಗಿದೆ. ಸಂತೋಷ ಮತ್ತು ಅಸಂತೋಷಗಳ ನಡುವೆ ತೊಳಲಾಡುತ್ತಿರುತ್ತದೆ. ಮನಸ್ಸನ್ನು ಸಂತೋಷದ ಸ್ಥಿತಿಯಲ್ಲಿಟ್ಟುಕೊಳ್ಳುವುದು ಅತ್ಯವಶ್ಯಕ. ಸಂತೋಷದ ಸ್ಥಿತಿಯಲ್ಲಿ ಹಲವಾರು ರಾಸಾಯನಿಕ ವಸ್ತುಗಳು (ಡೋಪೋಮಿನ್, ಸೆರಟೋನಿನ್, ಎಂಡಾರ್ಫಿನ್ ಇತ್ಯಾದಿ) ಅಧಿಕಪ್ರಮಾಣದಲ್ಲಿ ಸ್ರವಿಸಿ ದೇಹದ ಸಹಜಕ್ರಿಯೆಗಳಿಗೆ ಪೂರಕವಾಗಿ ಆರೋಗ್ಯ ವೃದ್ಧಿಸುತ್ತದೆ. ಅಸಂತೋಷದ ಸ್ಥಿತಿಯಲ್ಲಿ ಅಧಿಕಪ್ರಮಾಣದಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ವಸ್ತುಗಳು (ಅಡ್ರನಲಿನ್, ನಾರ್​ಅಡ್ರನಲಿನ್, ಸ್ಟೀರಾಯ್್ಡ ಇತ್ಯಾದಿ)ದೇಹದ ಸಹಜಕ್ರಿಯೆಗಳನ್ನು ಅಸ್ತವ್ಯಸ್ತಗೊಳಿಸಿ ಅನಾರೋಗ್ಯಕ್ಕೆ ನಾಂದಿಯಾಗುತ್ತವೆ.

            ಇಡೀ ಸೃಷ್ಟಿ ಭೌತಶಾಸ್ತ್ರದ ಪ್ರಕಾರ ವಸ್ತು ಮತ್ತು ಶಕ್ತಿಗಳಿಂದಾಗಿದ್ದು, ಅದರಿಂದ ರೂಪಿತವಾಗಿರುವ ಮಾನವದೇಹ ಸಹ ವಸ್ತು ಮತ್ತು ಶಕ್ತಿಗಳ ಪ್ರತಿಬಿಂಬವಾಗಿದೆ. ವಿಶ್ವಶಕ್ತಿಯ ಕಣ ಮನುಷ್ಯನಲ್ಲೂ ಅಡಗಿದ್ದು ಇದೇ ಆತ್ಮವಾಗಿರುತ್ತದೆ. ದೇಹದೊಳಗಿನ ಶಕ್ತಿಗೂ ವಿಶ್ವಶಕ್ತಿಗೂ ಅವಿನಾಭಾವ ಸಂಬಂಧವಿದ್ದು, ಇವೆರಡರ ಸಮತೋಲನವೂ ದೇಹದ ಕಾರ್ಯಕ್ಕೆ ಅತಿಮುಖ್ಯ. ದೇಹ, ಮನಸ್ಸು ಮತ್ತು ಆತ್ಮಗಳ ಸಂಘಟಿತ ಸಮತೋಲನ ಸಹ ದೇಹದ ಸಹಜಕ್ರಿಯೆಗಳಿಗೆ ಅತ್ಯವಶ್ಯಕ.

ಆರೋಗ್ಯ ಎಂದರೇನು?: ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯವನ್ನು ಈ ರೀತಿ ವ್ಯಾಖ್ಯಾನಿಸಿದೆ. ಆರೋಗ್ಯವೆಂದರೆ ಅದು ಕೇವಲ ಕಾಯಿಲೆ ಅಥವಾ ವಿಕಲತೆರಹಿತ ಸ್ಥಿತಿಯಾಗಿರದೆ ಅದು ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಸ್ಥಿತಿ ಎನ್ನಲಾಗಿದೆ. ಸುಸ್ಥಿತಿ ಎಂದರೆ ಸಂತೋಷ, ಶಾಂತಿ ಮತ್ತು ಸಮಾಧಾನಸ್ಥಿತಿ ಎಂದರ್ಥ. ಆರೋಗ್ಯವೆಂದರೆ ಸಂತೋಷ, ಅಸಂತೋಷವೆಂದರೆ ಅನಾರೋಗ್ಯ. ಈ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಆರೋಗ್ಯ ಎಂಬ 4 ಪ್ರಕಾರಗಳನ್ನು ಗುರುತಿಸಲಾಗಿದೆ. ಇವೆಲ್ಲವುಗಳ ಸುಸ್ಥಿತಿಯಿಂದ ಮಾತ್ರ ಆರೋಗ್ಯ ಉಂಟಾಗುತ್ತದೆ. ಆರೋಗ್ಯದ ಪ್ರತಿಯೊಂದು ಪ್ರಕಾರವನ್ನು ನಿಯಂತ್ರಿಸುವ ಅಂಶಗಳು ಹಲವಾರಿದ್ದು, ಅವೆಲ್ಲವುಗಳ ನಿಯಂತ್ರಣದಿಂದ ಮಾತ್ರ ಆರೋಗ್ಯ ಸಾಧ್ಯ. ದೇಹದ ರಚನೆ ಮತ್ತು ಕಾರ್ಯಗಳನ್ನು ನಿಯಂತ್ರಿಸುವ ವಂಶವಾಹಿಗಳು, ಆಹಾರ, ವ್ಯಾಯಾಮ, ಅಭ್ಯಾಸಗಳು ಇತ್ಯಾದಿಗಳು ದೈಹಿಕ ಆರೋಗ್ಯವನ್ನು ನಿಯಂತ್ರಿಸುತ್ತವೆ. ಮನಸ್ಸು ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವಗಳ ನಡುವೆ ಸಂಚರಿಸುತ್ತಿದ್ದು, ಸಕಾರಾತ್ಮಕ ಭಾವಗಳು ಸಂತೋಷವನ್ನು, ನಕಾರಾತ್ಮಕ ಭಾವಗಳು ಅಸಂತೋಷವನ್ನು ಉಂಟುಮಾಡುವುದರಿಂದ ಸಕಾರಾತ್ಮಕ ಭಾವಗಳು ಮೇಲುಗೈ ಪಡೆಯುವಂತೆ ಮನಸ್ಸನ್ನು ತರಬೇತಿಗೊಳಿಸುವುದು ಮಾನಸಿಕ ಆರೋಗ್ಯಕ್ಕೆ ಅತಿಮುಖ್ಯ. ಪರಿಸರದ ವ್ಯತ್ಯಾಸಗಳು, ಸಾಮಾಜಿಕ ನಡವಳಿಕೆಗಳು, ಧಾರ್ವಿುಕ ನಂಬಿಕೆಗಳು ಸಹ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಇವೆಲ್ಲವುಗಳನ್ನೊಳಗೊಂಡ ಸಾಮಾಜಿಕ ಆರೋಗ್ಯದ ಸುಸ್ಥಿತಿಯೂ ಸಹ ಆರೋಗ್ಯಕ್ಕೆ ಪೂರಕ.

          ಸೃಷ್ಟಿ ಮತ್ತು ಮನುಷ್ಯನ ಕ್ರಿಯೆಗಳೆಲ್ಲವೂ ಅತೀತಶಕ್ತಿಯೊಂದರ ನಿಯಂತ್ರಣದಲ್ಲಿವೆೆ. ಸೃಷ್ಟಿಯ ಪ್ರತಿಯೊಂದರೊಡನೆ ಮನುಷ್ಯ ಜೋಡಿತನಾಗಿದ್ದು, ಸೃಷ್ಟಿಯ ಎಲ್ಲವುಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮಬೀರುವುದರಿಂದ ಮನಸ್ಸನ್ನು ಸೃಷ್ಟಿಯ ಪೂರ್ವನಿಗದಿತ ಕಾರ್ಯಚಕ್ರಗಳ ಅರಿವಿನಿಂದ ಕೃಷಿಮಾಡಿಕೊಳ್ಳಬೇಕು. ಆ ಮೂಲಕ ದೇಹ, ಮನಸ್ಸು ಮತ್ತು ಆತ್ಮಗಳನ್ನು ಸಂಯೋಜಿಸಿ ಅತೀತ ಶಕ್ತಿಯ ಅರಿವಾಗಿಸಿಕೊಂಡು ಸಮಗ್ರ ದೃಷ್ಟಿಕೋನದ ಜೀವನಶೈಲಿಯನ್ನು ಪಾಲಿಸಬೇಕು. ನಿರಂತರ ಸಂತೋಷ ಗಳಿಕೆ ಮಾಡಿಕೊಳ್ಳುವುದೇ ಆಧ್ಯಾತ್ಮಿಕ ಆರೋಗ್ಯ. ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ವಿವಿಧ ಮಜಲುಗಳನ್ನು ಸಮನ್ವಯಗೊಳಿಸಿಕೊಳ್ಳುವ ಜೀವನಶೈಲಿಯನ್ನು ಅಧ್ಯಾತ್ಮ ಒಳಗೊಂಡಿದೆ. ಜನ್ಮದತ್ತವಾಗಿ ಈ ಅರಿವು ಎಲ್ಲರಲ್ಲಿದೆ. ಅದನ್ನು ಅನಾವರಣಮಾಡಿ ಪೋಷಿಸುವ ತರಬೇತಿ ಬಾಲ್ಯದಿಂದಲೂ ಅವಶ್ಯಕ. ಹಾಗಾದಲ್ಲಿ ಮಾತ್ರ ಆರೋಗ್ಯ ಸಾಧ್ಯ. ಯೋಗವೆಂಬುದು ಆರೋಗ್ಯದ ಎಲ್ಲ ಪ್ರಕಾರಗಳನ್ನೂ ಗಳಿಕೆಮಾಡಿಕೊಡುವ ವೈಜ್ಞಾನಿಕ ಅಭ್ಯಾಸ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries