ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳಗೊಳ್ಳುತ್ತಿರುವ ಬಗ್ಗೆ ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆ ಆತಂಕ ವ್ಯಕ್ತಪಡಿಸಿದೆ.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಸೋಂಕು ನಿಯಂತ್ರಣದಲ್ಲಿ ರಾಜ್ಯಕ್ಕೆ ಮಾದರಿಯೆನಿಸಿದ್ದ ಜಿಲ್ಲೆಯಲ್ಲಿ ಮತ್ತೆ ಸೋಂಕು ಹೆಚ್ಚಳಗೊಳ್ಳುತ್ತಿರುವುದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಭೆ ಕಳವಳ ವ್ಯಕ್ತಪಡಿಸಿದೆ. ಕೆಲವು ಶಿಕ್ಷಣಾಲಯಗಳಲ್ಲಿ ವಿದ್ಯಾರ್ಥಿಗಳಲ್ಲಿ ಸೋಂಕು ತಲೆದೋರಿರುವುದು ಗಮನಕ್ಕೆ ಬಂದಿದೆ. ತಕ್ಷಣ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾ ವೈದ್ಯಾಧಿಕಾರಿಗೆ ಹೊಣೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕೋವಿಡ್ ನಿಯಂತ್ರಣ ಸಂಹಿತೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳು ಚುರುಕುಗೊಳ್ಳವಬೇಕು, ಮಾಸ್ಟರ್ ಯೋಜನೆಯ ಶಿಕ್ಷಕರು ಸಕ್ರಿಯರಾಗಿ ರಂಗಕ್ಕಿಳಿಯಬೇಕು, ಚುನಾವಣೆ ಅಂಗವಾಗಿ ನಡೆಸಲಾಗುವ ಪ್ರಚಾರ ಕಾರ್ಯಕ್ರಮಗಳಲ್ಲಿ ಜಾಗೃತಿ ಪಾಲಿಸಬೇಕು, ಥರ್ಮಲ್ ಸ್ಕಾನಿಂಗ್ ಇಂಥಾ ಕಡೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ. ತರಬೇತಿ ಲಭಿಸಿದ ಆರೋಗ್ಯ ಕಾರ್ಯಕರ್ತರ ಸಹಾಯ ಈ ನಿಟ್ಟಿನಲ್ಲಿ ಪಡೆಯಬಹುದು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ ಆರ್.ಟಿ.ಪಿ.ಸಿ. ಟೆಸ್ಟ್ ಹೆಚ್ಚಳಗೊಳಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ದಂಡನಧಿಕಾರಿ ಅತುಲ್ ಎಸ್.ನಾಥ್, ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.






