ತಿರುವನಂತಪುರ: ಸಿಪಿಎಂ ಬೆದರಿಕೆ ತಂತ್ರದ ವಿರುದ್ದ ಕಸ್ಟಮ್ಸ್ ಆಯುಕ್ತ ಸುಮಿತ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪಕ್ಷವು ನಿರಂತರವಾಗಿ ಬೆದರಿಸಲು ಪ್ರಯತ್ನಿಸುತ್ತಿದೆ ಮತ್ತು ಅದು ಅದರ ಯೋಗ್ಯತೆಗೆ ತಕ್ಕುದಲ್ಲ ಎಂದು ಕಸ್ಟಮ್ಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ಎಲ್.ಡಿ.ಎಫ್.ನ ಪೋಸ್ಟರ್ ನ್ನು ಫೇಸ್‍ಬುಕ್ ಪೋಸ್ಟ್ ನಲ್ಲಿ ಹಂಚಿಕೊಂಡು ಸುಮಿತ್ ಕುಮಾರ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕಸ್ಟಮ್ಸ್ ಆಯುಕ್ತರ ಫೇಸ್‍ಬುಕ್ ಪೋಸ್ಟ್ ನಲ್ಲಿ ಎಲ್.ಡಿ.ಎಫ್. ಕಸ್ಟಮ್ಸ್ ಆಫೀಸ್ ವಿರುದ್ದ ಹೊರತಂದಿರುವ ಪ್ರತಿಭಟನಾ ಮೆರವಣಿಗೆಯ ಪೋಸ್ಟರ್ ಸೇರಿದಂತೆ ಚಿತ್ರಗಳನ್ನು ಹಂಚಿಕೊಂಡಿದೆ. ಎಲ್.ಡಿ.ಎಫ್ ಕನ್ವೀನರ್ ಎ.ವಿಜಯರಾಘವನ್ ಅವರು ಶನಿವಾರ ಕಸ್ಟಮ್ಸ್ ಕಚೇರಿಗಳಿಗೆ ಪ್ರತಿಭಟನಾ ಮೆರವಣಿಗೆ ಆಯೋಜಿಸುವುದಾಗಿ ಘೋಷಿಸಿದ ಬೆನ್ನಿಗೇ ಕಸ್ಟಮ್ಸ್ ಆಯುಕ್ತರ ಪ್ರತಿಕ್ರಿಯೆ ಹಂಚಿಕೆಯಾಗಿದೆ.
ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮತ್ತು ಎಲ್.ಡಿ.ಎಫ್ ಸರ್ಕಾರವನ್ನು ಅಪಖ್ಯಾತಿಗೊಳಿಸಲು ಕಸ್ಟಮ್ಸ್ ರಾಜಕೀಯ ಆಟ ಆಡುತ್ತಿದೆ ಎಂದು ವಿಜಯರಾಘವನ್ ಆರೋಪಿಸಿದ್ದರು. ಎಲ್.ಡಿ.ಎಫ್ ಕಾರ್ಮಿಕ ಸಂಘಟನೆಗಳು ಶನಿವಾರ ತಿರುವನಂತಪುರ, ಕೊಚ್ಚಿ ಮತ್ತು ಕೋಝಿಕೋಡ್ ನಲ್ಲಿರುವ ಕಸ್ಟಮ್ಸ್ ಪ್ರಾದೇಶಿಕ ಕಚೇರಿಗಳಿಗೆ ಮೆರವಣಿಗೆ ನಡೆಸಲಿದೆ ಎಂದು ವಿಜಯರಾಘವನ್ ಘೋಷಿಸಿದ್ದರು.





