ಮಲಪ್ಪುರಂ: ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಗೊಂಡ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಲಪ್ಪುರಂ ನಲ್ಲಿ ಚುನಾವಣಾ ಪ್ರಚಾರ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಅವರು, ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿ, ಆ ಬಳಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರೊಂದಿಗೂ ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಈಗ ಶಬರಿಮಲೆ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಚೆನ್ನಾಗಿದೆ. ಈಗ ಶಬರಿಮಲೆ ವಿಷಯ ಚರ್ಚಿಸುವ ಅಗತ್ಯವಿಲ್ಲ. ಈಗ ವಿಧಾನಸಭಾ ಚುನಾವಣೆ ಬಂದಿರುವುದರಿಂದ ಕೆಲವರಿಗೆ ದೇವಾಲಯದ ಬಗ್ಗೆ ಆಸಕ್ತಿ ಬಂದಿದೆ. ಅವರ ಉದ್ದೇಶ ಸ್ಪಷ್ಟವಾಗಿದೆ. ಆದರೆ ದೇವಾಲಯದ ವಿಷಯವನ್ನು ಅದು ಇರುವಂತೆಯೇ ನೋಡಬೇಕು. ಈ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳ ಸಂದರ್ಭದಲ್ಲೂ ವಿಷಯ ಪ್ರಸ್ತಾಪಿಸಲಾಗಿತ್ತು" ಎಂದು ವಿಜಯನ್ ಹೇಳಿದ್ದಾರೆ.
ಎಡಪಕ್ಷದ ಸರ್ಕಾರ ನಿಲುವಿನ ಬಗ್ಗೆಯೂ ವಿಜಯನ್ ಮಾತನಾಡಿದ್ದು, ಸುಪ್ರೀಂ ಕೋರ್ಟ್ ಶಬರಿಮಲೆಗೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಂಡಿತ್ತು. ಆ ನಂತರ ಕೆಲವು ರಿಯಾಯಿತಿಗಳನ್ನೂ ನೀಡಿತ್ತು. ಈಗ ಕೋರ್ಟ್ ಅಂತಿಮ ತೀರ್ಮಾನ ನೀಡಬೇಕಿದೆ ಎಂದಷ್ಟೇ ಹೇಳಿದ್ದಾರೆ.
ಎಡಪಕ್ಷವನ್ನು ಸೋಲಿಸಲು ಯುಡಿಎಫ್ ಜೊತೆಗೆ ಬಿಜೆಪಿಗೆ ಒಪ್ಪಂದವಾಗಿದೆ ಎಂಬ ಬಿಜೆಪಿಯ ಒ ರಾಜಗೋಪಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಜಯನ್, ಸ್ವತಃ ಬಿಜೆಪಿ ನಾಯಕರೇ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ, ಇದರಿಂದ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

