ಪೆರ್ಲ: ಜಿಲ್ಲೆಯ ಹಿಂದುಳಿಯುವಿಕೆಗೆ ಇಲ್ಲಿಂದ ಆಯ್ಕೆಯಾಗಿ ತೆರಳುತ್ತಿರುವ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಕಾರಣರಾಗಿದ್ದು, ಬದಲಾವಣೆಗಾಗಿ ಈ ಬಾರಿ ಬಿಜೆಪಿಯನ್ನು ಬಹುಮತದಿಂದ ಆರಿಸುವಂತೆ ಬಿಜೆಪಿ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.
ಅವರು ಶನಿವಾರ ಬಜಕೂಡ್ಲು ವಿಷ್ಣು ನಾವಡ ಅವರ ನಿವಾಸದಲ್ಲಿ ಜರುಗಿದ ಎಣ್ಮಕಜೆ ಪಂಚಾಯಿತಿ 15ನೇ ವಾರ್ಡುಸಮಿತಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಉನ್ನತ ಶಿಕ್ಷಣ, ಮೇಲ್ದರ್ಜೆಯ ಆಸ್ಪತ್ರೆ ಒಳಗೊಂಡಂತೆ ಬಹುತೇಕ ವಿಷಯಗಳಿಗೆ ಕಾಸರಗೋಡಿನ ಜನತೆ ಕರ್ನಾಟಕವನ್ನು ಅವಲಂಬಿಸಬೇಕಾಗುತ್ತಿದ್ದು, ಇಲ್ಲಿನ ಸರ್ಕಾರ ಅಥವಾ ಜನಪ್ರತಿನಿಧಿಗಳು ಈ ಬಗ್ಗೆ ಕುರುಡು ನೀತಿ ಅನುಸರಿಸುತ್ತಿರುವುದು ಖಂಡನೀಯ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ತೆರಳಿರುವ ಪ್ರತಿನಿಧಿ ವಿಧಾನಸಭೆಗೆ ತೆರಳುವುದರ ಬದಲು ಜೈಲಿನಲ್ಲಿ ಕಾಲ ಕಳೆಯಬೇಕಾಗಿ ಬಂದಿರುವುದು ವಿಪರ್ಯಾಸ. ಎಡ ಹಾಗೂ ಬಲ ರಂಗಗಳೆರಡೂ ಮಂಜೇಶ್ವರ ಕ್ಷೇತ್ರದ ಜನತೆಯನ್ನು ವಂಚಿಸಿದೆ. ಈ ಬಾರಿ ಬದಲಾವಣೆಗಾಗಿ ಬಿಜೆಪಿಯನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮುಖಂಡರಾದ ಮೋನಪ್ಪ ಭಂಡಾರಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜಾರಾಮ ಭಟ್, ಸತ್ಯಶಂಕರ ಭಟ್, ರೂಪವಾಣಿ ಆರ್. ಭಟ್, ಹರೀಶ್ಚಂದ್ರ ಮಂಜೇಶ್ವರ, ಉದಯ ಚೆಟ್ಯಾರ್, ಶಶಿಭೂಷಣ ಶಾಸ್ತ್ರಿ ುಪಸ್ಥಿತರಿದ್ದರು. ಪ್ರವೀಣ್ ಅಡಿಗ ಸ್ವಾಗತಿಸಿ, ವಂದಿಸಿದರು.





