ತಿರುವನಂತಪುರ: ಅಪರಾಧಿ ಹಿನ್ನೆಲೆಯುಳ್ಳವರನ್ನು ಅಭ್ಯರ್ಥಿಗಳನ್ನಾಗಿಸುವ ರಾಜಕೀಯಪಕ್ಷಗಳು ಅದಕ್ಕಿರುವ ಕಾರಣವನ್ನು ಚುನಾವಣೆ ಕಳೆದು 30ದಿವಸದೊಳಗೆ ಆಯೋಗಕ್ಕೆ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ವಿಧಾನಸಭೆಗೆ ಪ್ರವೇಶಿಸದಿರುವಂತೆ ಮಾಡುವ ಆಯೋಗದ ಮೊದಲ ಪ್ರಯತ್ನ ಇದಾಗಿದೆ. ಹಣಕಾಸು ಸೇರಿ ವಿವಿಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಚುನಾವಣೆಯಲ್ಲಿ ಸ್ಪರ್ಧಿಸದಿರುವಂತೆ ರಾಜಕೀಯ ಪಕ್ಷಗಳು ಗಮನಹರಿಸಬೇಕು. ಇಂತಹ ಅಭ್ಯರ್ಥಿಗಳಿಗೆ ಸ್ಪರ್ಧೆಗೆ ಅವಕಾಶ ನೀಡಿದಲ್ಲಿಈ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ನೀಡಬೇಕು. ಈ ಬಗ್ಗೆ ಚು.ಆಯೋಗ ಸರ್ವೋಚ್ಛ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಹೊಸ ಆದೇಶ ಪ್ರಕಾರ ರಾಷ್ಟ್ರೀಯ ಪಕ್ಷಗಳು ಕೇಂದ್ರ ಹಾಗೂ ರಾಜ್ಯ ಮಟ್ಟದ ಪಕ್ಷಗಳು ರಾಜ್ಯ ಚುನಾವಣಾ ಆಯೋಗಕ್ಕೂ ವರದಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಕೆ ವೇಳೆ ಫಾರಂನಲ್ಲಿ ತನ್ನ ಕ್ರಿಮಿನಲ್ ಕೇಸುಗಳ ಬಗ್ಗೆ ಮಾಹಿತಿ ನೀಡಬೇಕು ಹಾಗೂ ಇದನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು.
ಮತಗಟ್ಟೆಗಳಲ್ಲಿ ಸೂಖ್ಷ್ಮ ಸಂವೇದಿ ಮತಗಟ್ಟೆಗಳ ನಿರ್ವಹಣಾ ಹೊಣೆಯನ್ನು ರಾಜ್ಯ ಪೊಲೀಸರ ಬದಲು ಕೇಂದ್ರ ಸೇನೆಗೆ ವಹಿಸಿಕೊಡುವ ಬಗ್ಗೆಯೂ ಆಯೋಗ ಚಿಂತನೆ ನಡೆಸುತ್ತಿದೆ. ರಾಜ್ಯದಲ್ಲಿ ಅತಿ ಸೂಕ್ಷ್ಮ ಸಂವೇದಿ ಮತಗಟ್ಟೆಗಳ ರಕ್ಷಣಾ ಜವಾಬ್ದಾರಿಯನ್ನು ಕೇಂದ್ರ ಸೇನೆಗೆ ವಹಿಸಿಕೊಡುವಂತೆ ಕೆಲವು ರಾಜಕೀಯ ಪಕ್ಷಗಳೂ ಒತ್ತಾಯಿಸಿತ್ತು.





