ಕಾಸರಗೋಡು: ಶೋರ್ನೂರ್-ಕಣ್ಣೂರು ಮೆಮು ರೈಲು ಮಾ. 16ರಿಂದ ಪುನರಾರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿರುವ ಮಧ್ಯೆ ಪ್ರಸಕ್ತ ರೈಲನ್ನು ಕಾಸರಗೋಡು-ಮಂಗಳೂರು ವರೆಗೂ ವಿಸ್ತರಿಸುವಂತೆ ಜನತೆ ಆಗ್ರಹಿಸಿದ್ದಾರೆ.
ಕೇರಳದಲ್ಲಿ ಪ್ರಸಕ್ತ ಸರ್ವೀಸ್ ನಡೆಸುತ್ತಿರುವ ಏಳು ಪ್ಯಾಸೆಂಜರ್ ರೈಲುಗಳ ಬದಲು ಮೆಮು ರೈಲು ಸಂಚಾರ ನಡೆಸಲು ಇಲಾಖೆ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಶೋರ್ನೂರ್-ಕಣ್ಣೂರು ಮಧ್ಯೆ ಪ್ರತಿ ದಿನ ಮೆಮು ರೈಲಿಗೆ ಎರಡು ಸರ್ವೀಸ್ ನಡೆಸಲಿದೆ.
ರಾಜ್ಯದ ಪ್ರಮುಖ ರೈಲ್ವೆ ಜಂಕ್ಷನ್ಗಳಲ್ಲಿ ಒಂದಾದ ಶೋರ್ನೂರ್ನಿಂದ ಹೊರಟು ಕಣ್ಣೂರು ವರೆಗೆ ಸಂಚರಿಸುವ ಮೆಮು ರೈಲನ್ನು ಕಾಸರಗೋಡು ಹಾಗೂ ಮಂಗಳೂರಿಗೆ ವಿಸ್ತರಿಸಿದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೋಯಿಕ್ಕೋಡಿನಿಂದ ಕಣ್ಣೂರಿಗೆ 89ಕಿ.ಮೀ ಹಾಗೂ ಕಣ್ಣೂರಿನಿಂದ ಮಂಗಳೂರಿಗೆ 132ಕಿ.ಮೀ ದೂರವಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ಯಾಸೆಂಜರ್ ರೈಲುಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಜನತೆ ಕಂಗಾಲಾಗಿದ್ದು, ಮೆಮು ರೈಲನ್ನು ಕಣ್ಣೂರಿನಿಂದ ಮಂಗಳೂರು ವರೆಗೆ ವಿಸ್ತರಿಸುವಂತೆ ಜನತೆ ಆಗ್ರಹಿಸಿದ್ದಾರೆ.