ತಿರುವನಂತಪುರ: ಕಾರಿನ ಮುಂಭಾಗದಲ್ಲಿ ವಿಂಡ್ ಸ್ಕ್ರೀನ್ ನ ಮಧ್ಯ ಭಾಗದಲ್ಲಿ, ಕಾರಿನೊಳಗಿನ ರಿಯರ್ ವ್ಯೂ ಗ್ಲಾಸ್ ನಲ್ಲಿ ಅಲಂಕಾರಿಕ ವಸ್ತುಗಳು ಮತ್ತು ನೆಕ್ಲೇಸ್ ಗಳನ್ನು ನೇತುಹಾಕುವ ವ್ಯಾಪಕ ಪ್ರವೃತ್ತಿ ಇದೆ. ಚಾಲಕನ ವೀಕ್ಷಣೆಗೆ ಅಡ್ಡಿಯಾಗುವ ರೀತಿಯಲ್ಲಿ ಅಲಂಕಾರಿಕ ವಸ್ತುಗಳನ್ನು ಕಾರಿನೊಳಗೆ ನೇತಾಡಿಸುವುದು ಕಾನೂನುಬಾಹಿರ. ಇವು ಚಾಲಕರ ಸಲೀಸಾದ ವಾಹನ ಚಲಾಯಿಸುವಿಕೆಗೆ ಅಡ್ಡಿಯಾಗಿ ಅಪಘಾತಗಳಾಗುತ್ತಿವೆ ಎಂಬ ಸಂಶೋಧನೆಯ ಬಳಿಕ ಇದೀಗ ಕ್ರಮ ಕೈಗೊಳ್ಳುವಂತೆ ಸರ್ಕಾರ ಸಾರಿಗೆ ಆಯುಕ್ತರಿಗೆ ನಿರ್ದೇಶನ ನೀಡಿದೆ.
ದೊಡ್ಡ ಗೊಂಬೆಗಳನ್ನು ರಿಯರ್ ವ್ಯೂ ಕನ್ನಡಿಯಲ್ಲಿ ನೇತಾಡಿಸುವುದು ಸಾಮಾನ್ಯವಾಗಿದ್ದು, ಇದು ಅಪರಾಧ. ಕುಶನ್ ಗಳಿಂದ ಮುಚ್ಚುವುದು ಸಹ ಕಾನೂನುಬಾಹಿರವಾಗಿದೆ. ಕಾರುಗಳ ಕೂಲಿಂಗ್ ಪೇಪರ್‍ಗಳು ಮತ್ತು ಪರದೆಗಳನ್ನು ತೆಗೆದು ಹಾಕುವಂತೆಯೂ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮೋಟಾರು ವಾಹನ ಇಲಾಖೆಗೆ ನಿರ್ದೇಶನ ನೀಡಿದೆ.
ವಾಹನದ ಕಿಟಕಿಗಳು ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು. ಸ್ಟಿಕ್ಕರ್‍ಗಳು, ಕೂಲಿಂಗ್ ಪೇಪರ್‍ಗಳು ಅಥವಾ ಪರದೆಗಳನ್ನು ಬಳಸಬಾರದು. ಅಂತಹ ಅಲಂಕಾರಗಳು ಚಾಲಕನ ವೀಕ್ಷಿಸುವ ಮಟ್ಟವನ್ನು ಅಸ್ಪಷ್ಟಗೊಳಿಸುತ್ತದೆ ಎಂಬ ಹೈಕೋರ್ಟ್ ನ ಆದೇಶದ ಅನ್ವಯ ಸರ್ಕಾರ ಕಠಿಣ ಕಾನೂನು ಜಾರಿಗೆ ಮುಂದಾಗಿದೆ.



