ಕಾಸರಗೋಡು: ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಪ್ರಕಾರ ಕೋಮು ಭಾವನೆಗಳನ್ನು ಕೆರಳಿಸಿ ಮತಯಾಚನೆ ನಡೆಸದಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆರಾಧನಾಲಯಗಳನ್ನು ಚುನಾವಣಾ ಪ್ರಚಾರಕ್ಕಿರುವ ವೇದಿಕೆಯಾಗಿಸಬಾರದು. ಜನಾಂಗ, ಜಾತಿ, ಭಾಷೆ ಹೀಗೆ ವಿವಿಧ ವಿಚಾರಗಳಲ್ಲಿ ಜನತೆಯ ನಡುವೆ ಬಿರುಕುಂಟುಮಾಡಿ, ಘರ್ಷಣೆಗೆ ಅವಕಾಶಮಾಡಿಕೊಡದಿರುವಂತೆಯೂ ಸೂಚಿಸಲಾಗಿದೆ.
ಇತರ ರಾಜಕೀಯ ಪಕ್ಷಗಳ ಕುರಿತು ಟೀಕೆ ನಡೆಸುವುದು ಕೇವಲ ಆ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳ ಬಗ್ಗೆ ಸೀಮಿತವಾಗಿರಬೇಕು. ಪ್ರತಿಪಕ್ಷದ ನೇತಾರರ ಯಾ ಕಾರ್ಯಕರ್ತರ ವ್ಯಕ್ತಿಗತ ವಿಚಾರಗಳ ಬಗ್ಗೆ ಟೀಕೆಯಿರದಂತೆಯೂ ಸೂಚಿಸಲಾಗಿದೆ. ಖಾಸಗಿ ವ್ಯಕ್ತಿಗಳ ಜಾಗ, ಕಟ್ಟಡ ಆವರಣಗೋಡೆಗಳಲ್ಲಿ ಮಾಲಿಕರ ಅನುಮತಿಯಿಲ್ಲದೆ ಬ್ಯಾನರ್, ನೋಟೀಸು ಇತ್ಯಾದಿ ಲಗತ್ತಿಸುವುದು, ಮತದಾತರಿಗೆ ಲಂಚ, ಬೆದರಿಕೆ ಒಡ್ಡುವಿಕೆ, ಒಬ್ಬರ ಬದಲು ಇನ್ನೊಬ್ಬ ಮತದಾನ ನಡೆಸುವುದು, ವ್ಯಕ್ತಿಯೊಬ್ಬರ ಕೌಟುಂಬಿಕ ಬದುಕಿಗೆ ತಡೆಯಾಗುವಂತೆ ನಡೆದುಕೊಳ್ಳುವುದು, ಇತರ ರಾಜಕೀಯ ಪಕ್ಷಗಳು ನಡೆಸುವ ಸಾರ್ವಜನಿಕ ಸಭೆ, ಮೆರವಣಿಗೆಗೆ ತಡೆಯುಂಟುಮಾಡುವುದು, ರಾಜಕೀಯ ಪಕ್ಷವೊಂದು ಲಗತ್ತಿಸಿದ ಭಿತ್ತಿಪತ್ರವನ್ನು ಮತ್ತೊಂದು ಪಕ್ಷದ ಕಾರ್ಯಕರ್ತರು ತೆರವುಗೊಳಿಸುವುದು ಶಿಕ್ಷಾರ್ಹವಾಗಿರುವುದಾಗಿಯೂ ಸೂಚಿಸಲಾಗಿದೆ.



