ಆಲಪ್ಪುಳ: ಎಸ್‍ಡಿಪಿಐ ಕಾರ್ಯಕರ್ತರ ದಾಳಿಗೊಳಗಾಗಿ ಮೃತಪಟ್ಟ ಆರ್‍ಎಸ್‍ಎಸ್ ಕಾರ್ಯಕರ್ತ ನಂದು ಅವರ ಮನೆಗೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ ಬುಧವಾರ ಭೇಟಿ ನೀಡಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದ ಬಿಜೆಪಿ ವಿಜಯ ಮೆರವಣಿಗೆಯ ಅಂಗವಾಗಿ ಅವರು ಆಲಪ್ಪುಳಕ್ಕೆ ನೀಡಿದ ಭೇಟಿಯ ವೇಳೆ ನಂದು ಅವರ ಮನೆಗೂ ಸಂಸರ್ಶನ ನಡೆಸಲಾಯಿತು. ತೇಜಸ್ವಿ ಸೂರ್ಯ ನಂದು ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದರು.
ಫೆಬ್ರವರಿ 24 ರಂದು ನಂದು ಅವರನ್ನು ಹತ್ಯೆ ಮಾಡಲಾಗಿತ್ತು. ನಾಗಮಕುಲಂಗರ ಜಂಕ್ಷನ್‍ನಲ್ಲಿ ಈ ಘಟನೆ ನಡೆದಿತ್ತು. ನಂದು ಜೊತೆಗೆ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರನ್ನೂ ಹಲ್ಲೆ ನಡೆಸಲಾಗಿತ್ತು. ನಂದು ತಲೆಗೆ ಬಿದ್ದ ಬಲವಾದ ಏಟಿನಿಂದ ಮೃತಪಟ್ಟರು. ಈ ಪ್ರಕರಣದಲ್ಲಿ ಒಟ್ಟು 25 ಆರೋಪಿಗಳಿದ್ದಾರೆ ಎಂದು ಪೋಲೀಸರು ತೀರ್ಮಾನಿಸಿದ್ದಾರೆ. ಈ ಹಿಂದೆ ನಂದು ಅವರ ಮನೆಗೆ ಕೇಂದ್ರ ಸಚಿವ ವಿ.ಮುರಲೀಧರನ್ ಮತ್ತು ಪ್ರಹ್ಲಾದ್ ಜೋಶಿ ಭೇಟಿ ನೀಡಿದ್ದರು.
ಕೊಲೆ ಮತ್ತು ಪಿತೂರಿ ಸೇರಿದಂತೆ 12 ಸೆಕ್ಷನ್‍ಗಳಡಿ ಪೋಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಘಟನೆಯಲ್ಲಿ ಶಾಮೀಲಾದ ಒಂಬತ್ತು ಮಂದಿ ಸೇರಿದಂತೆ 25 ಜನರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆಯಲ್ಲಿ ಎರಡು ಕತ್ತಿಗಳನ್ನು ಬಳಸಲಾಗಿದೆ ಎಂದು ಪೋಲೀಸರು ಪತ್ತೆ ಮಾಡಿದ್ದಾರೆ.





