ತಿರುವನಂತಪುರ: ಹಲವು ಊಹಾಪೋಪಗಳ ಬಳಿಕ ಕಳಕೂಟ್ಟಂ ಕ್ಷೇತ್ರದ ಎನ್.ಡಿ.ಎ.ಅಭ್ಯರ್ಥಿಯಾಗಿ ಶೋಭಾ ಸುರೇಂದ್ರನ್ ಅವರಿಗೆ ಸ್ಥಾನ ನೀಡಲಾಗಿದೆ. ಕೇಂದ್ರ ನಾಯಕತ್ವದ ತೀವ್ರ ಒತ್ತಡದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೋಭಾ ಸುರೇಂದ್ರನ್ ಪರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ. ಶೋಭಾ ಸುರೇಂದ್ರನ್ ಕೂಡ ಇದನ್ನು ದೃಢಪಡಿಸಿದ್ದಾರೆ.
ಕೇಂದ್ರ ಸಚಿವ ವಿ.ಮುರಳೀಧರನ್ ಸ್ಪರ್ಧಿಸಲು ಉದ್ದೇಶಿಸಿದ್ದ ಕಳಕೂಟ್ಟಂ ಕ್ಷೇತ್ರವನ್ನು ಬಿಜೆಪಿ ಕೇಂದ್ರ ನಾಯಕತ್ವವು ಶೋಭಾಗೆ ನೀಡುವ ಮೂಲಕ ಹೊಸತೊಂದು ಚರ್ಚೆಗೂ ಕಾರಣವಾಗುವ ನಿರೀಕ್ಷೆ ಇದೆ. ಅಲ್ಲದೆ ವಿ.ಮುರಳೀಧರನ್ ಅವರು ಬಿಡಿಜೆಎಸ್ ಮುಖಂಡ ತುಷಾರ್ ವೆಳ್ಳಾಪಳ್ಳಿ ಅವರನ್ನು ಈ ಕ್ಷೇತ್ರದಿಂದ ಕಣಕ್ಕೆ ನಿಯೋಜಿಸಲು ಚಿಂತಿಸಿದ್ದರೆಂದೂ ಹೇಳಲಾಗುತ್ತಿದೆ.
ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಿಜೆಪಿ ಕಳಕೂಟ್ಟಂ ಕ್ಷೇತ್ರದ ಅಭ್ಯರ್ಥಿಯ ಹೆಸರಿಗೆ ಯಾರನ್ನೂ ಸೇರಿಸಿರಲಿಲ್ಲ. ಇದರ ಬೆನ್ನಲ್ಲೇ, ಕಳಕ್ಕೂಟಂ ನಲ್ಲಿ ತುಷಾರ್ ವೆಳ್ಳಾಪಳ್ಳಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಸೂಚನೆಗಳಿತ್ತು.
ಆರಂಭದಲ್ಲಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಶೋಭಾ ಸುರೇಂದ್ರನ್ ನಿರ್ಧರಿಸಿದ್ದರು. ಆದರೆ, ಪಿಣರಾಯಿ ಸಂಪುಟದ ದೇವಸ್ವಂ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ವಿರುದ್ಧ ಸ್ಪರ್ಧಿಸಲು ಪಕ್ಷ ಸಮರ್ಥರನ್ನು ಹುಡುಕುವ ಮಧ್ಯೆ ಶೋಭಾ ಸುರೇಂದ್ರನ್ ಹೆಸರು ಬಲವಾಗಿ ಕೇಳಿಬಂದಿತ್ತು. ಭಕ್ತರ ನಂಬಿಕೆಗಳ ವಿರುದ್ಧದ ಹೋರಾಟವನ್ನು ಮುನ್ನಡೆಸಿದ ಮತ್ತು ನಂಬುವವರನ್ನು ನೋಯಿಸಿದವರು ಕಡಕಂಪಲ್ಲಿ ಸುರೇಂದ್ರನ್ ಎಂದು ತೀವ್ರ ವಾಗ್ದಾಳಿ ನಡೆಸಿದ್ದ ಶೋಭಾ ಭಕ್ತರ ಹಿತಾಸಕ್ತಿಗಳನ್ನು ಕಾಪಾಡಲು ಕಡಗಂಪಳ್ಳಿಯ ವಿರುದ್ಧ ಸ್ಪರ್ಧಿಸುತ್ತಿದ್ದೇನೆ ಎಂದಿರುವರು.





