ತಿರುವನಂತಪುರ: ಕೋವಿಡ್‍ನಿಂದ ಸಾವನ್ನಪ್ಪುವವರ ಶವಗಳನ್ನು ಸಂಬಂಧಿಕರ ಧಾರ್ಮಿಕ ನಂಬಿಕೆಗಳ ಪ್ರಕಾರ ಅಂತ್ಯಕ್ರಿಯೆ ಮಾಡುವ ನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ. ರಾಜ್ಯದಲ್ಲಿ ಇನ್ನು ಯಾರೇ ಮೃತಪಟ್ಟರೂ ಸ್ಥಳೀಯಾಡಳಿತ ಸಂಸ್ಥೆಯ ಕಾರ್ಯದರ್ಶಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕು.
ಆಸ್ಪತ್ರೆಯಲ್ಲಿ ಸಾವಾದರೆ, ಶವವನ್ನು ರೋಗಿಯ ವಿಳಾಸ ಸೇರಿದಂತೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗೆ ಹಸ್ತಾಂತರಿಸಲಾಗುವುದು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗೆ ಅರ್ಜಿ ಸಲ್ಲಿಸಿದ ಬಳಿಕ ಸಂಬಂಧಿಕರು ಶವವನ್ನು ಬೇರೆ ಯಾವುದೇ ಸಮಾಧಿ ಸ್ಥಳಕ್ಕೆ ಕೊಂಡೊಯ್ಯಬಹುದು.
ಆಸ್ಪತ್ರೆಯ ವಾರ್ಡ್‍ನಿಂದ ದೇಹವನ್ನು ತೆಗೆಯುವ ಮೊದಲು ಸಂಬಂಧಿಕರಿಗೆ ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ನೋಡಲು ಅವಕಾಶವಿದೆ. ಕೋವಿಡ್ ದೃಢೀಕರಿಸಬೇಕಾದ ಪರಿಸ್ಥಿತಿ ಇದ್ದರೆ ಮಾದರಿಯನ್ನು ಸಂಗ್ರಹಿಸಲಾಗುತ್ತದೆ. ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯದೆ ದೇಹವನ್ನು ಸಂಸ್ಕಾರ ನಡೆಸಲು ಬಿಟ್ಟುಕೊಡಲಾಗುತ್ತದೆ. ಕಾರ್ಯದರ್ಶಿಯ ಪತ್ರದ ಆಧಾರದ ಮೇಲೆ ಶವವನ್ನು ಆಸ್ಪತ್ರೆಯಿಂದ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಅಂತ್ಯಕ್ರಿಯೆಯ ವ್ಯವಸ್ಥೆ ಮಾಡಲು ಸ್ಥಳೀಯ ಅಧಿಕಾರಿಗಳು ಸಹಾಯ ಮಾಡುತ್ತಾರೆ.
ಕೋವಿಡ್ ನಿಂದ ಮೃತಪಟ್ಟರೇ ಎಂಬ ಸಂಶಯಗಳಿದ್ದರೆ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಅಗತ್ಯ ಇದೆ. ಪಿಪಿಇ ಕಿಟ್ ಸೇರಿದಂತೆ ರಕ್ಷಣಾತ್ಮಕ ಉಡುಪಿನಲ್ಲಿರುವ ಮೂರು ಅಥವಾ ನಾಲ್ಕು ಸಂಬಂಧಿಕರು ಅಥವಾ ಸ್ವಯಂಸೇವಕರಿಗೆ ಮಾತ್ರ ದೇಹ ಮುಚ್ಚಿರುವ ಚೀಲವನ್ನು ಸ್ಪರ್ಶಿಸಲು ಅವಕಾಶವಿರುತ್ತದೆ. ಧಾರ್ಮಿಕ ಸಮಾರಂಭಗಳಾದ ಧರ್ಮಗ್ರಂಥಗಳನ್ನು ಪಠಿಸುವುದು ಮತ್ತು ಮೃತ ದೇಹವನ್ನು ಮುಟ್ಟದೆ ತೀರ್ಥ ಸಿಂಪಡಿಸುವುದಾದರೆ ಅಡ್ಡಿಗಳಿರುವುದಿಲ್ಲ. ಸಮಾಧಿ ಮಾಡುವುದಾದರೆ ತೋಡಲಾಗುವ ಗುಂಡಿ ಕನಿಷ್ಠ 6 ಅಡಿ ಆಳದಲ್ಲಿರಬೇಕು. ಚಿತಾಭಸ್ಮ ಸಂಗ್ರಹಕ್ಕೆ ಯಾವುದೇ ಅಡ್ಡಿಯಿಲ್ಲ.
ಶವವನ್ನು ಬೇರೆ ಜಿಲ್ಲೆಗಳಿಗೆ ಕೊಂಡೊಯ್ಯಬೇಕಾದರೆ ಆಸ್ಪತ್ರೆಯಿಂದ ಮರಣ ಪ್ರಮಾಣಪತ್ರ ಮತ್ತು ಲಭ್ಯವಿರುವ ಪರೀಕ್ಷಾ ಪ್ರಮಾಣಪತ್ರಗಳನ್ನು ನೀಡಬೇಕು. ಶವಗಳ ಕಾಪಿಡುವ(ಎಂಬಾಮಿಂಗ್) ಮಾಡಲು ಅನುಮತಿ ಇಲ್ಲ.





