ಕಾಸರಗೋಡು: ಕಾಸರಗೊಡು ಜಿಲ್ಲೆಯಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುವುದು ಎಂದು ಬಂದರು, ವಸ್ತು ಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಭರವಸೆ ನೀಡಿದರು.
ಜಿಲ್ಲೆಯ ಶಾಸಕರಿಗೆ ಕಾಸರಗೋಡು ಜಿಲ್ಲಾ ಪಂಚಾಯತ್ ವತಿಯಿಂದ ಶನಿವಾರ ನಡೆದ ಅಭಿನಂದನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಸ್ತು ಸಂಗ್ರಹಾಲಯವಿಲ್ಲದ ಜಿಲ್ಲೆ ಕಾಸರಗೋಡು ಆಗಿದೆ. ಈ ಕಾರಣದಿಂದ ಜಿಲ್ಲೆಗೆ ಈ ನಿಟ್ಟಿನಲ್ಲಿ ಆದ್ಯತೆ ನೀಡಲಾಗುವುದು. ನೀಲೇಶ್ವರದಲ್ಲಿ ಸಂಗ್ರಹಾಲಯ ಸ್ಥಾಪನೆಯ ಆಲೋಚನೆಯಿದೆ. ನೀಲೇಶ್ವರ ರಾಜವಂಶದೊಂದಿಗೆ ಮತ್ತು ಸ್ಥಳೀಯಾಡಳಿತೆ ಸಂಸ್ಥೆ ಪ್ರತಿನಿಧಿಗಳೊಂದಿಗೆ ಶಾಸಕರು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಸಚಿವ ನುಡಿದರು.
ಮಂಗಳೂರು ಬಂದರು ಕಾಸರಗೋಡು ಜಿಲ್ಲೆಯ ಸಮೀಪವಿದ್ದರೂ, ಬಂದರು ಇಲಾಖೆಗೆ ಪ್ರತಿ ವರ್ಷ 30 ಕೋಟಿ ರೂ. ವರೆಗಿನ ಆದಾಯ ಕಾಸರಗೋಡು ಜಿಲ್ಲೆಯಿಂದ ಲಭಿಸುತ್ತಿದೆ. ಕರಾವಳಿ ವಲಯ ಸಂಬಂಧ ಯೋಜನೆಗಳು ಪರಿಶೀಲನೆಯಲ್ಲಿವೆ.
ಪೆÇನ್ನಾನಿಯ ಮರಳು ಸುಚೀಕರಣ ಕೇಂದ್ರವನ್ನು ಹೋಲುವ ಇನ್ನೊಂದು ಕೆಂದ್ರವನ್ನು ಕಾಸರಗೋಡು ಜಿಲ್ಲೆಯಲ್ಲಿ ಸ್ಥಾಪಿಸಲಾಗುವುದು ಎಂದವರು ತಿಳಿಸಿದರು.
ಕಾಸರಗೋಡು ತಳಂಗರೆಯ 4.8 ಎಕ್ರೆ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಪ್ರವಾಸೋದ್ಯಮ ಕೇಂದ್ರವಾಗಿಸಲಾಗುವುದು. ಅನೇಕ ಸಂಸ್ಥೆಗಳು ಸ್ಥಾಪನೆಗೊಳ್ಳುವ ಸಾಧ್ಯತೆಯಿರುವ ಜಿಲ್ಲೆ ಕಾಸರಗೋಡು ಆಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದೊಂದಿಗೆ ಯೋಜನೆಗಳನ್ನು ಜಾರಿಗೊಳಿಸುವ ವಿಚಾರ ಆಲೋಚನೆಯಲ್ಲಿವೆ. ಬೇಡಿಕೆ ಅನೇಕಗಳಿರುವ ಜಿಲ್ಲೆ ಎಂಬ ಪರಿಶೀಲನೆ ಕಾಸರಗೋಡಿಗೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ವಲಯ ಸಹಿತ ಎಲ್ಲ ವಲಯಗಳಲ್ಲಿ ಸಮಗ್ರ ಅಭಿವೃದ್ಧಿಗೆ ಸರ್ವ ರೀತಿ ಯತ್ನಿಸಲಾಗುವುದು ಎಂದು ಸಚಿವ ನುಡಿದರು.
ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ನ್ಯಾಯವಾದಿ ಸಿ.ಎಚ್.ಕುಂಞಂಬು, ಎಂ.ರಾಜಗೋಪಾಲನ್ ಅವರಿಗೆ ಅಭಿನಂದನೆ ನಡೆಯಿತು. ಸಚಿವ ಸ್ಮರಣಿಕೆಗಳನ್ನು ಹಸ್ತಾಂತರಿಸಿದರು. ಜಲಸಂರಕ್ಷಣೆ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ನಡೆಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದ ಪುರಸ್ಕಾರಕ್ಕೆ ಭಾಜನರಾದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಗೌರವಾರ್ಪಣೆ ನಡೆಯಿತು. ಸಚಿವ ಅಭಿನಂದನೆ ನಡೆಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಶಿಕ್ಷಣ-ಆರೋಗ್ಯ ವಲಯಗಳ ಅಭಿವೃದ್ಧಿ ಸಂಬಂಧ ಮನವಿಯನ್ನು ಬೇಬಿ ಬಾಲಕೃಷ್ಣನ್ ಅವರು ಸಚಿವರಿಗೆ ಹಸ್ತಾಂತರಿಸಿದರು. ಮುಖ್ಯಮಂತ್ರಿ ವಾಕ್ಸಿನ್ ಚಾಲೆಂಜ್ ಗೆ ಕಾಞಂಗಾಡು ಬ್ಲೋಕ್ ಪಂಚಾಯತ್ ನ ದೇಣಿಗೆಯನ್ನು ಬ್ಲೋಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಉಪಾಧ್ಯಕ್ಷೆ ಶ್ರೀಲತಾ ಸಚಿವರಿಗೆ ಹಸ್ತಾಂತರಿಸಿದರು.
ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ನ್ಯಾಯವಾದಿ ಎಸ್.ಎನ್.ಸರಿತಾ, ಗೀತಾ ಕೃಷ್ಣನ್, ಷಿನೋಜ್ ಚಾಕೋ, ಕೆ.ಶಕುಂತಲಾ, ಸದಸ್ಯರಾದ ಎಂ.ಮನು, ಗೋಲ್ಡನ್ ಅಬ್ದುಲ್ ರಹಮಾನ್, ಪಿ.ಬಿ.ಷಫೀಕ್, ಜಮೀಲಾ ಸಿದ್ದೀಖ್, ಜಾಸ್ಮಿನ್ ಕಬೀರ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು ಸ್ವಾಗತಿಸಿದರು. ಕಾರ್ಯದರ್ಶಿ ಪಿ.ನಂದಕುಮಾರ್ ವಂದಿಸಿದರು.


