ಬದಿಯಡ್ಕ: ಪುರಾತನವಾದ ಸಾವಿರದ ಎಂಟು ನೂರು ವರ್ಷಗಳ ಇತಿಹಾಸವುಳ್ಳ ಪುತ್ರಕಳ ಬೂಡಿನ ಜೀರ್ಣೋದ್ಧಾರಕ್ಕೆ ತೊಡಗಲಾಗಿದ್ದು ಇದರ ಅಂಗವಾಗಿ ನೂತನ ತರವಾಡು ಮನೆ ಹಾಗೂ ದೈವಸ್ಥಾನಗಳ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಸಲಾಯಿತು.
ಸರ್ಕಾರದ ಕೋವಿಡ್ ನಿಯಮದಂತೆ ನಡೆದ ಸರಳ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಶಿಲಾನ್ಯಾಸಗೈದರು. ಬೂಡಿನ ತಂತ್ರಿಮನೆತನದವರಾದ ಅರವಿಂದ ಕುಮಾರ್ ಅಲೆವೂರಾಯ,ತಂತ್ರಿಗಳಾದ ಶಂಕರ ನಾರಾಯಣ ಕಡಮಣ್ಣಾಯ ತಾಂತ್ರಿಕ ವಿಧಿವಿದಾನಗಳಿಗೆ ನೇತೃತ್ವ ನೀಡಿದರು.
ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬೂಡಿನ ಭಕ್ತರ ಅಭಿಷ್ಠೆಯಂತೆ ದೈವ ದೇವರುಗಳ ಅನುಗ್ರಹದಲ್ಲಿ ನಿರ್ಮಾಣ ಕಾರ್ಯ ಶೀಘ್ರವಾಗಿ ನೇರೆವೇರಲಿ, ಒಗ್ಗಟ್ಟು ಹಾಗೂ ದೈವ ಬಲದ ಇಂತಹ ಸತ್ಕಾರ್ಯದಲ್ಲಿ ಪ್ರತಿಯೊಬ್ಬರು ಸ್ವತಃ ತೊಡಗಿಸಿಕೊಂಡಲ್ಲಿ ಜನ್ಮಾಂತರದ ಶ್ರೇಯಸ್ಸು ಲಭ್ಯ ಎಂದು ಆಶೀರ್ವಚನ ನುಡಿಗಳನ್ನಾಡಿದರು.
ಬೂಡಿನ ಹಿರಿಯರಾದ ಬೈಂಕಿ ಭಂಡಾರಿ ಅಧ್ಯಕ್ಷತೆವಹಿಸಿದ್ದರು. ಬೂಡಿನ ಆಡಳಿತ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು,ಊರವರು ಉಪಸ್ಥಿತರಿದ್ದರು. ಸಂತೋಷ್ ರೈ ಪುತ್ರಕಳ ಸ್ವಾಗತಿಸಿ ಪ್ರಜ್ವಲ್ ರೈ ವಂದಿಸಿದರು.





