ಬೆಂಗಳೂರು: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಎ.ಕೆ.ಎಂ ಅಶ್ರಫ್ ಅವರಿಗೆ ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಪರವಾಗಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ.ಸೋಮಶೇಖರ್ ಪತ್ರದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದಿರುವ ಎ.ಕೆ.ಎಂ ಅಶ್ರಫ್ ಅವರು ಕನ್ನಡಪರ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದರು. ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡದ ಅಸ್ಮಿತೆಯ ಪ್ರತೀಕವಾಗಿರುವ ಎ.ಕೆ.ಎಂ ಅಶ್ರಫ್ ಅವರು ಕನ್ನಡಿಗರ ಹಾಗೂ ಕನ್ನಡಪರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಶ್ರಮಿಸುವಂತೆ ವಿನಂತಿಸಿಕೊಳ್ಳುವುದಾಗಿ ಸೋಮಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


