ಆಲಪ್ಪುಳ: ವಿಧಾನಸಭಾ ಹಣಾಹಣಿಯಲ್ಲಿ ಯುಡಿಎಫ್ ನ ಕಳಪೆ ಸಾಧನೆಯ ಹಿನ್ನೆಲೆಯಲ್ಲಿ ರಮೇಶ್ ಚೆನ್ನಿತ್ತಲ ಪ್ರತಿಪಕ್ಷ ನಾಯಕ ಹುದ್ದೆಯನ್ನು ವಹಿಸಿಕೊಳ್ಳುವುದಿಲ್ಲ ಎಂಬ ಸೂಚನೆಗಳಿವೆ. 2016 ರಲ್ಲಿ ಅಧಿಕಾರ ತ್ಯಜಿಸಿದ ಬಳಿಕ ನಾಯಕತ್ವವನ್ನು ವಹಿಸಿಕೊಳ್ಳದ ಉಮ್ಮನ್ ಚಾಂಡಿ ಅವರ ಉದಾಹರಣೆಯನ್ನು ರಮೇಶ್ ಚೆನ್ನಿತ್ತಲ ಅನುಸರಿಸುವ ಸಾಧ್ಯತೆ ಇದೆ. ಪರಾವೂರಿನ ಎಡ ಭದ್ರಕೋಟೆಯಲ್ಲಿ ಸತತ ನಾಲ್ಕು ಬಾರಿ ಜಯಗಳಿಸಿರುವ ವಿ.ಡಿ.ಸತೀಶನ್ ಅವರು ಪ್ರತಿಪಕ್ಷದ ನಾಯಕರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಚೆನ್ನಿತ್ತಲ ಅವರಿಗೆ ಸರ್ಕಾರದ ವಿರುದ್ಧ ಸಮರ್ಥರಾಗಿ ಸಾಕಷ್ಟು ಹೋರಾಟಗಳನ್ನು ತರಲು ಸಾಧ್ಯವಿತ್ತು. ಆದರೆ ಅದನ್ನು ಪಕ್ಷದ ಏಳ್ಗೆಗಾಗಿ ಬಳಸುವಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರಮೇಶ್ ಚೆನ್ನಿತ್ತಲ ಅವರು ತಮ್ಮ ಜಿಲ್ಲೆಯಲ್ಲೂ ಸಹ ಪರಿಣಾಮಕಾರಿಯಾಗಿ ಪ್ರಭಾವ ಬೀರಲು ವಿಫಲರಾಗಿದ್ದಾರೆ. ಅಲಪ್ಪುಳ ಜಿಲ್ಲೆಯಲ್ಲಿ 10,000 ಮತಗಳ ಮುನ್ನಡೆ ಸಾಧಿಸಿದ ಹರಿಪ್ಪಾಡ್ ಹೊರತುಪಡಿಸಿ ಎಲ್‍ಡಿಎಫ್ ಎಲ್ಲಾ ಕ್ಷೇತ್ರಗಳನ್ನು ಗೆದ್ದಿದೆ.
21 ಕಾಂಗ್ರೆಸ್ ಶಾಸಕರಲ್ಲಿ 10 ಮಂದಿ ಐ ಗುಂಪಿನವರು. ಪ್ರಸ್ತುತ ಸನ್ನಿವೇಶದಲ್ಲಿ, ವಿಷಯಗಳನ್ನು ಚೆನ್ನಾಗಿ ಕಲಿಯಲು ಮತ್ತು ಪ್ರಸ್ತುತಪಡಿಸಲು ಸತೀಶನ್ ಅವರ ಸಾಮಥ್ರ್ಯವು ಪ್ರತಿಪಕ್ಷದ ಸ್ಥಾನಕ್ಕಾಗಿ ಪರಿಗಣಿಸಲು ಸಕಾರಾತ್ಮಕ ಅಂಶವಾಗಿದೆ. ನಾಯಕತ್ವ ಮಟ್ಟದಲ್ಲಿ ವ್ಯಕ್ತಿಗಳ ಬದಲಾವಣೆ ಮತ್ತು ಯುವ ನಾಯಕರಿಗೆ ಸ್ಥಾನ ನೀಡುವುದು ಪಕ್ಷ ಮತ್ತೆ ಬಲಗೊಳ್ಳಲು ಇರುವ ಏಕೈಕ ಮಾರ್ಗವಾಗಿದೆ ಎಂದು ನಾಯಕರು ಮತ್ತು ಕಾರ್ಯಕರ್ತರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ವಿ.ಡಿ.ಸತೀಶನ್ ಅವರು ಪ್ರತಿಪಕ್ಷದ ನಾಯಕರಾಗಬೇಕೆಂಬ ಬೇಡಿಕೆ ಬಲಗೊಳ್ಳುತ್ತಿದೆ.





