ಕಾಸರಗೋಡು: ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಸೀಟುಗಳ ಸಂಖ್ಯೆಯನ್ನು ನೂರರ ಅಂಚಿಗೆ ತಲುಪಿಸಿರುವ ಎಡರಂಗ, ಸರ್ಕಾರ ರಚನೆಯ ಪ್ರಕ್ರಿಯೆಗೂ ಚಾಲನೆ ದೊರೆತಿದೆ.
ಕಾಸರಗೋಡು ಜಿಲ್ಲೆಯಿಂದ ಈಗಾಗಲೇ ಸಚಿವ ಸ್ಥಾನ ಅಲಂಕರಿಸಿರುವ ಸಿಪಿಐನ ಇ.ಚಂದ್ರಶೇಖರನ್ ಅವರ ಜತೆಗೆ, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಸಿಪಿಎಂನ ಸಿ. ಎಚ್ ಕುಞಂಬು ಅವರ ಹೆಸರೂ ಕೇಳಿ ಬರಲಾರಂಭಿಸಿದೆ. ಎರಡನೇ ಬಾರಿಗೆ ಸಚಿವರಾಗಲು ಇ.ಚಂದ್ರಶೇಖರನ್ ಹಿಂದೇಟು ಹಾಕುತ್ತಿದ್ದರೂ, ಪಕ್ಷ ಅವರ ಮೇಲೆ ಒತ್ತಡ ಹೇರುತ್ತಿರುವುದರಿಂದ ಅನಿವಾರ್ಯವಾಗಿ ಸಚಿವಸಂಪುಟ ಸೇರ್ಪಡೆಗೊಳ್ಳಳಿದ್ದಾರೆ.
ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಸಿ.ಎಚ್ ಕುಞಂಬು ಅವರ ಹೆಸರೂ ಸಚಿಸ್ಥಾನಕ್ಕೆ ಕೇಳಿ ಬರುತ್ತಿದೆ. ಸಿಪಿಎಂ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮೇ 4ರಂದು ತಿರುವನಂತಪುರದಲ್ಲಿ ನಡೆಯಲಿದ್ದು, ಯಾರ್ಯಾರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಯಿದೆ.





