ಕಾಸರಗೋಡು: ಇತರ ರಾಜ್ಯಗಳ ಕಾರ್ಮಿಕರ ಸಹಾಯಕ್ಕೆ ಕಾರ್ಮಿಕ ಇಲಾಖೆ ಮತ್ತು ಸಪ್ಲೈ ಕೋ ರಂಗಕ್ಕಿಳಿದಿದೆ.
ಇದರ ಅಂಗವಾಗಿ ಲಾಕ್ ಡೌನ್ ಅವಧಿಯಲ್ಲಿ ಅಕ್ಕಿ ಸಹಿತ ಧಾನ್ಯಗಳ ಕಿಟ್ ಇತರ ರಾಜ್ಯಗಳ ಪ್ರತಿ ಕಾರ್ಮಿಕರಿಗೆ ತಲಪಿಸಲಾಗುತ್ತಿದೆ. ನೌಕರಿ ಮಾಲೀಕರ ವ್ಯಾಪ್ತಿಯಲ್ಲಿ ಅಲ್ಲದೆ ದುಡಿಯುತ್ತಿರುವ 5 ಸಾವಿರಕ್ಕೂ ಅಧಿಕ ಇತರ ರಾಜ್ಯಗಳ ಕಾರ್ಮಿಕರು ಕಾಸರಗೋಡು ಜಿಲ್ಲೆಯಲ್ಲಿದ್ದಾರೆ ಎಂದು ಪ್ರಾಥಮಿಕ ಗಣನೆ ತಿಳಿಸುತ್ತಿದೆ. ಕಾಸರಗೋಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 1645 ಮಂದಿಗೂ, ಕಾಞಂಗಾಡು ಸಹಾಯಕ ಕಾರ್ಮಿಕ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ 1625 ಮಂದಿಗೂ ಸೇರಿದಂತೆ ಈ (ಮೇ 28) ವರೆಗೆ 3270 ಮಂದಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಗಿದೆ.
5 ಕಿಲೋ ಅಕ್ಕಿ, ತಲಾ 2 ಕಿಲೋ ಗೋಧಿ ಪುಡಿ, ಕಡ್ಲೆ, ಎಣ್ಣೆ, ತಲಾ ಒಂದು ಕಿಲೋ ತೊಗರಿ ಬೇಳೆ, ನೀರುಳ್ಳಿ, 100 ಗ್ರಾಂ ಮೆಣಸಿನ ಪುಡಿ, 5 ಮಾಸ್ಕ್ ಸಹಿತ 10 ಸಾಮಾಗ್ರಿಗಳು ಈ ಕಿಟ್ ನಲ್ಲಿವೆ. ಕಾರ್ಮಿಕ ತಂಗಿರುವ ಪ್ರದೇಶಗಳಿಗೇ ತೆರಳಿ ಇಲಾಖೆ ಸಿಬ್ಬಂದಿ ಕಿಟ್ ವಿತರಿಸುತ್ತಿದ್ದಾರೆ.
ಪ್ರತಿ ಪ್ರದೇಶಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳ ಸಹಾಯದೊಂದಿಗೆ ಈ ಕಾರ್ಮಿಕರನ್ನು ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ಅವರ ಮಾಹಿತಿಗಳ ಸಂಗ್ರಹವೂ ನಡೆಯುತ್ತಿದೆ ಎಂದು ಕಾಸರಗೋಡು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್ ತಿಳಿಸಿದರು.
ಇತರ ರಾಜ್ಯಗಳ ಕಾರ್ಮಿಕರು ತಂಗಿರುವ ಪ್ರದೇಶಗಳಿಗೆ ತೆರಳಿ ಕೋವಿಡ್ ವಿರುದ್ಧ ಜನಜಾಗೃತಿ ಮೂಡಿಸುವ ಪ್ರಕ್ರಿಯೆಯೂ ನಡೆಯುತ್ತಿದೆ. ಆಯಾ ಕಾರ್ಮಿಕರ ಭಾಷೆ ಬಲ್ಲ ಸಿಬ್ಬಂದಿಯ ಸಹಾಯವನ್ನೂ ಈ ನಿಟ್ಟಿನಲ್ಲಿ ಬಳಸಲಾಗುತ್ತಿದೆ.





