ಕಾಸರಗೋಡು: ಸಮುದ್ರದಲ್ಲಿ ತಲೆದೋರಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಜಿಲ್ಲಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಕಾಸರಗೋಡು ಸೇರಿದಂತೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮ ಮೇ 16ರ ವರೆಗೂ ಬಿರುಸಿನ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಮೂಸೋಡಿ ಕಡಪ್ಪುರದಲ್ಲಿ ಸಮುದ್ರ ಕೊರೆತದಿಂದ ಮೂಸಾ ಎಂಬವರ ಎರಡಂತಸ್ತಿನ ಮನೆಯೊಂದು ಸಮುದ್ರಪಾಲಾಗಿದೆ. ಕಸಬಾ, ಚೇರಂಗೈ, ಅಜನೂರ್ ಕರಾವಳಿಯಲ್ಲಿ ಸಮುದ್ರ ಕೊರೆತದಿಂದ ಅಪಾರ ಹಾನಿ ಸಂಭವಿಸಿದೆ.
ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ 30 ಮಂದಿ ಸದಸ್ಯರಿರುವ ರಾಷ್ಟ್ರೀಯ ವಿಪತ್ತು ನಿವಾರಣೆ ಸೇನೆಯನ್ನು ನೇಮಿಸಲಾಗಿದೆ. ಸಮುದ್ರದಲ್ಲಿ 4 ಮೀ. ವರೆಗಿನ ಎತ್ತರದಲ್ಲಿ ಅಲೆಗಳು ತಲೆದೋರಬಹುದು ಎಂಬ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಜನವಾಸವಿರುವ ಮುಸೋಡಿ, ಚೇರಂಗಾಯಿ, ಕಾಪಿಲ್, ತೈಕಡಪ್ಪುರಂ ಪ್ರದೇಶಗಳಲ್ಲಿ ಕಂದಾಯ, ಮೀನುಗಾರಿಕೆ, ಕರಾವಳಿ ಪೆÇಲೀಸ್ ಇಲಾಖೆ ಜಾಗ್ರತಾ ಕ್ರಮ ಕೈಗೊಂಡಿದೆ. ಜತೆಗೆ ಸ್ಥಳೀಯಾಡಳಿತ ಸಂಸ್ಥೆಗಳು ವಿಪತ್ತು ನಿವಾರಣೆ ಚಟುವಟಿಕೆಗಾಗಿ ರಂಗಕ್ಕಿಳಿಯುವಂತೆ ಸೂಚಿಸಲಾಗಿದೆ. ನಾಲ್ಕು ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲೂ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿವೆ.
ತಾಲೂಕು ಮಟ್ಟದ ನಿಯಂತ್ರಣ ಕೊಠಡಿ:
ಕಾಸರಗೋಡು ಜಿಲ್ಲೆಯಲ್ಲಿ ಮಂಜೇಶ್ವರ, ಕಾಸರಗೋಡು, ಹೊಸದುರ್ಗ, ವೆಳ್ಲರಿಕುಂಡ್ ತಾಲೂಕುಗಳಲ್ಲಿ 24ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಗಳು ಸಜ್ಜುಗೊಂಡಿವೆ. ಬಿರುಸಿನ ಗಾಳಿ,ಅಮುದ್ರದಲ್ಲಿ ಬಿರುಸಿನ ಅಲೆಗಳುತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೀನುಗಾರಿಕೆ, ಪೆÇಲೀಸ್, ಕಂದಾಯ ಇಲಾಖೆಗಳು ಕರಾವಳಿ ಪ್ರದೇಶಗಳಲ್ಲಿ ಜಾಗರೂಕತೆ ನಡೆಸುತ್ತಿದ್ದಾರೆ. ಮುಸೋಡಿ ಕಡಪ್ಪುರಂ, ಕಾಪಿಲ್ ಬೀಚ್, ತೈಕಡಪ್ಪುರಂ ಸಹಿತಪ್ರದೇಶಗಳಲ್ಲಿ ಹೆಚ್ಚುವರಿ ಜಾಗೃತಿ ನಡೆಸಲಾಗುತ್ತಿದೆ. ತಾಲೂಕು ಮಟ್ಟಗಳ ನಿಯಂತ್ರಣಕೊಠಡಿಗಳ ದೂರವಾಣಿ ಸಂಖ್ಯೆಗಳು ಇಂತಿವೆ:
ಮಂಜೇಶ್ವರ - 04998-244022
ಕಾಸರಗೋಡು - 04994-230021
ಹೊಸದುರ್ಗ - 0467-2204042
ವೆಳ್ಳರಿಕುಂಡ್ - 0467-2242320.
ಕಾಸರಗೋಡು ಜಿಲ್ಲಾ ಮಟ್ಟದ ತುರ್ತು ಕ್ರಮ ಕೇಂದ್ರದ ದೂರವಾಣಿ ಸಂಖ್ಯೆ: 04994-257700.




