ದೇಶದಲ್ಲಿ ಕೋವಿಡ್ ಮೂರನೇ ಅಲೆಯು ಅಪ್ಪಳಿಸುವ ಸಾಧ್ಯತೆಯ ನಡುವೆಯೇ ಈವರೆಗೆ ಲಸಿಕೆ ಹಾಕಿಸಿಕೊಂಡಿರದ ಭಾರತೀಯರಲ್ಲಿ ಶೇ.12ರಷ್ಟು ಜನರು ತಮಗೆ ಲಸಿಕೆ ಬೇಡವೇ ಬೇಡ ಎಂದು ಹೇಳಿದ್ದರೆ,ಇನ್ನೊಂದು ಶೇ.12ರಷ್ಟು ಜನರು ಅಡ್ಡಪರಿಣಾಮಗಳ ಭೀತಿಯಿಂದಾಗಿ ಲಸಿಕೆಯನ್ನು ಹಾಕಿಸಿಕೊಳ್ಳಲು ಯೋಜಿಸಿಲ್ಲ ಎಂದು ಜನಾಭಿಪ್ರಾಯ ಸಂಗ್ರಹ ಸಂಸ್ಥೆ ಲೋಕಲ್ಸರ್ಕಲ್ಸ್ ನಡೆಸಿರುವ ಹೊಸ ಸಮೀಕ್ಷೆಯು ತಿಳಿಸಿದೆ.
ಶೇ.29ರಷ್ಟು ಜನರು ಶೀಘ್ರವೇ ಲಸಿಕೆಯ ಮೊದಲ ಡೋಸ್ ಅನ್ನು ಪಡೆದುಕೊಳ್ಳಲು ಉದ್ದೇಶಿಸಿದ್ದರೆ,ಶೇ.24ರಷ್ಟು ಜನರು ಈಗ ಲಭ್ಯವಿರುವ ಲಸಿಕೆಗಳು ಇತ್ತೀಚಿನ ಮತ್ತು ಭವಿಷ್ಯದ ಕೊರೋನವೈರಸ್ ಪ್ರಭೇದಗಳ ವಿರುದ್ಧ ಸಾಕಷ್ಟು ರಕ್ಷಣೆಯನ್ನು ಒದಗಿಸುತ್ತವೆಯೇ ಎನ್ನುವ ಬಗ್ಗೆ ಇನ್ನೂ ಮನದಟ್ಟಾಗದಿರುವುದರಿಂದ ಈಗಲೇ ಲಸಿಕೆಯನ್ನು ಪಡೆಯುವ ಬಗ್ಗೆ ಆಲೋಚಿಸಿಲ್ಲ. ಹೆಚ್ಚಿನ ಮಾಹಿತಿಗಳು ಅಥವಾ ಬೇರೆ ಲಸಿಕೆಗಳು ಲಭ್ಯವಾದರೆ ಅವರು ಲಸಿಕೆ ಹಾಕಿಸಿಕೊಳ್ಳಲು ಮನಸ್ಸು ಮಾಡಬಹುದು ಎಂದು ಸಮೀಕ್ಷಾ ವರದಿಯು ತಿಳಿಸಿದೆ.
ತಮಗಿರುವ ರೋಗಗಳು ತಾವು ಲಸಿಕೆ ಪಡೆಯುವುದಕ್ಕೆ ಅಡ್ಡಿಯಾಗಿವೆ ಎಂದು ಸಮೀಕ್ಷೆಗೊಳಗಾದವರ ಪೈಕಿ ಶೆ.23ರಷ್ಟು ಜನರು ಹೇಳಿದ್ದಾರೆ. ದೇಶದ 279 ಜಿಲ್ಲೆಗಳ 8,949 ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು,ಈ ಪೈಕಿ ಶೇ.65ರಷ್ಟು ಪುರುಷರಿದ್ದರೆ ಶೇ.35ರಷ್ಟು ಮಹಿಳೆಯರಾಗಿದ್ದರು. ಶೇ.48ರಷ್ಟು ಜನರು ಮೊದಲ,ಶೇ.24ರಷ್ಟು ಜನರು ಎರಡನೇ ದರ್ಜೆಯ ನಗರಗಳಿಗೆ ಸೇರಿದ್ದರೆ ಶೇ.28ರಷ್ಟು ಜನರು 3 ಮತ್ತು 4ನೇ ದರ್ಜೆಯ ನಗರಗಳು ಮತ್ತು ಗ್ರಾಮೀಣ ಜಿಲ್ಲೆಗಳಿಗೆ ಸೇರಿದವರಾಗಿದ್ದರು.
33 ಕೋಟಿ ಜನರು ಲಸಿಕೆಯನ್ನು ಪಡೆಯದಿರಬಹುದು ಎಂದು ತಿಳಿಸಿರುವ ವರದಿಯು,ಭಾರತದಲ್ಲಿ 94 ಕೋಟಿ ವಯಸ್ಕ ಜನಸಂಖ್ಯೆಯಿದೆ ಮತ್ತು 24 ಕೋಟಿ ಜನರು ತಮ್ಮ ಮೊದಲ ಡೋಸ್ ಪಡೆದಿದ್ದಾರೆ ಎಂದು ಪರಿಗಣಿಸಿದರೆ,70 ಕೋಟಿ ವಯಸ್ಕರು ಇನ್ನೂ ಲಸಿಕೆಯನ್ನು ಹಾಕಿಸಿಕೊಂಡಿಲ್ಲ ಎಂದು ಬೆಟ್ಟುಮಾಡಿದೆ.






