ನವದೆಹಲಿ: ತಾವು ಖರೀದಿಸಲು ಬಯಸಿರುವ ಭೂಮಿಯು ಯಾವುದೇ ಕಾನೂನು ವಿವಾದದಲ್ಲಿ ಸಿಕ್ಕಿಕೊಂಡಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಇ-ನ್ಯಾಯಾಲಯಗಳನ್ನು ಭೂದಾಖಲೆಗಳು ಮತ್ತು ನೋಂದಣಿ ದತ್ತಾಂಶ ಸಂಚಯದೊಂದಿಗೆ ಜೋಡಣೆಗೊಳಿಸಲು ಸರಕಾರವು ಯೋಜಿಸಿದೆ.
ಈ ಕ್ರಮವು ದೀರ್ಘಾವಧಿಯಲ್ಲಿ ಸಂಶಯಾತ್ಮಕ ವಹಿವಾಟುಗಳನ್ನು ಕಡಿಮೆ ಮಾಡುತ್ತದೆ,ವಿವಾದಗಳನ್ನು ತಡೆಯುವಲ್ಲಿ ನೆರವಾಗುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಅಡೆತಡೆಗಳನ್ನೂ ಕಡಿಮೆ ಮಾಡುತ್ತದೆ ಎಂದು ಸರಕಾರವು ಭಾವಿಸಿದೆ.
ಇ-ನ್ಯಾಯಾಲಯಗಳನ್ನು ಭೂದಾಖಲೆಗಳು ಮತ್ತು ನೋಂದಣಿ ದತ್ತಾಂಶ ಸಂಚಯದೊಂದಿಗೆ ಜೋಡಣೆಗೊಳಿಸುವ ಪ್ರಾಯೋಗಿಕ ಯೋಜನೆಯನ್ನು ಮಹಾರಾಷ್ಟ್ರ,ಉತ್ತರ ಪ್ರದೇಶ ಮತ್ತು ಹರ್ಯಾಣಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು,ಶೀಘ್ರವೇ ದೇಶಾದ್ಯಂತ ಹಮ್ಮಿಕೊಳ್ಳಲಾಗುವುದು.
ಆಸ್ತಿ ವಿವಾದಗಳ ತ್ವರಿತ ಇತ್ಯರ್ಥಕ್ಕಾಗಿ ಭೂದಾಖಲೆಗಳು ಮತ್ತು ನೋಂದಣಿ ದತ್ತಾಂಶ ಸಂಚಯವನ್ನು ಇ-ನ್ಯಾಯಾಲಯಗಳು ಮತ್ತು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಜಾಲದೊಂದಿಗೆ ಸಂಯೋಜಿಸಲು ರಾಜ್ಯ ಸರಕಾರಗಳಿಗೆ ಅನುಮತಿ ನೀಡುವಂತೆ ಕಾನೂನು ಸಚಿವಾಲಯದ ನ್ಯಾಯ ಇಲಾಖೆಯು ಕಳೆದ ಎಪ್ರಿಲ್ನಲ್ಲಿ ಎಲ್ಲ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್ಗಳನ್ನು ಕೋರಿಕೊಂಡಿದ್ದು, ಎಂಟು ಉಚ್ಚ ನ್ಯಾಯಾಲಯಗಳು ಇದಕ್ಕೆ ಸ್ಪಂದಿಸಿವೆ.
ಸುಲಲಿತ ಉದ್ಯಮ ಸೂಚ್ಯಂಕ ಕುರಿತು 190 ಜಾಗತಿಕ ಆರ್ಥಿಕತೆಗಳ ಸಾಧನೆಗಳ ವೌಲ್ಯಮಾಪನಕ್ಕಾಗಿ ವಿಶ್ವಬ್ಯಾಂಕ್ ಬಳಸುವ ಮಾನದಂಡಗಳಲ್ಲಿ ಸುಲಭ ಮತ್ತು ಪಾರದರ್ಶಕ ವಿಧಾನದಲ್ಲಿ ಆಸ್ತಿ ನೋಂದಣಿಯು ಒಂದಾಗಿದೆ. ಭೂ ಸಂಪನ್ಮೂಲಗಳ ಇಲಾಖೆಯು ಆಸ್ತಿ ಸೂಚ್ಯಂಕವನ್ನು ನೋಂದಾಯಿಸುವ ಹೊಣೆಗಾರಿಕೆಯನ್ನು ಹೊಂದಿದ್ದು,ಗುಣಮಟ್ಟದ ಭೂ ಆಡಳಿತ ಸೂಚ್ಯಂಕಕ್ಕಾಗಿ ಒಟ್ಟು 13 ಅಂಕಗಳಲ್ಲಿ ಅದು ಕೇವಲ 3.5 ಅಂಕಗಳನ್ನು ಗಳಿಸಿದೆ ಎಂದು ನ್ಯಾಯ ಇಲಾಖೆಯು ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್ಗಳಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿತ್ತು.





