ನವದೆಹಲಿ : ಈ ವರ್ಷಾಂತ್ಯದ ವೇಳೆಗೆ ಭಾರತದ ಇಡೀ ವಯಸ್ಕ ಜನಸಂಖ್ಯೆಗೆ ಕರೊನಾ ಲಸಿಕೆ ನೀಡಿ ಮುಗಿಸುವ ಗುರಿ ಹೊಂದಿದ್ದು, ಅದಕ್ಕೆ ಅಗತ್ಯವಾದ ಸುಮಾರು 188 ಕೋಟಿ ಲಸಿಕೆ ಡೋಸ್ಗಳನ್ನು ಕನಿಷ್ಠ ಐದು ಉತ್ಪಾದಕರಿಂದ ಪಡೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ತನ್ನ ಲಸಿಕಾ ನೀತಿಯ ಕುರಿತು ಕೋರ್ಟ್ ಕೇಳಿದ್ದ ಹಲವು ಪ್ರಶ್ನೆಗಳಿಗೆ ಉತ್ತರವಾಗಿ ಶನಿವಾರ ಸಲ್ಲಿಸಿರುವ 375 ಪುಟಗಳ ಅಫಿಡೆವಿಟ್‌ನಲ್ಲಿ, ಸರ್ಕಾರ ಈ ಮಾಹಿತಿ ನೀಡಿದೆ.
'18 ವರ್ಷ ಮೇಲ್ಪಟ್ಟ ಜನರ ಒಟ್ಟು ಸಂಖ್ಯೆಯು ಸುಮಾರು 93-94 ಕೋಟಿಯಷ್ಟಿದ್ದು, ಎಲ್ಲರಿಗೂ ಲಸಿಕೆ ನೀಡಲು ಅಂದಾಜು 186 ರಿಂದ 188 ಕೋಟಿ ಲಸಿಕೆ ಡೋಸ್ಗಳು ಬೇಕಾಗುತ್ತವೆ. ಇದರಲ್ಲಿ ಜುಲೈ 31 ರವರೆಗೆ 51.6 ಕೋಟಿ ಡೋಸ್ಗಳನ್ನು ಲಭ್ಯಗೊಳಿಸಲಾಗುವುದು. ಮತ್ತೆ ಉಳಿದ 135 ಕೋಟಿ ಡೋಸ್ಗಳನ್ನು ಕಾಲಕ್ರಮೇಣ ಪಡೆದು ಇಡೀ ಅರ್ಹ ವಯೋಮಾನದ ಜನಸಂಖ್ಯೆಗೆ ಲಸಿಕಾಕರಣ ಪೂರೈಸಲಾಗುವುದು' ಎಂದು ಸರ್ಕಾರ ತಿಳಿಸಿದೆ. ಈ ದೊಡ್ಡ ಪ್ರಮಾಣದ ಲಸಿಕೆಗಳನ್ನು ಹೇಗೆ ಸಂಗ್ರಹಿಸಲು ಯೋಜಿಸಿದೆ ಎಂದೂ ಸರ್ಕಾರ ವಿವರಗಳನ್ನು ನೀಡಿದೆ.
ಜೂನ್ 21 ರಿಂದ ಎಲ್ಲಾ ವಯಸ್ಕರಿಗೆ ಉಚಿತ ಲಸಿಕಾ ಅಭಿಯಾನವನ್ನು ವಿಸ್ತರಿಸಲಾಗಿದೆ. ಕೋವಿನ್ ನೋಂದಣಿಯ ಅನುಕೂಲವಿಲ್ಲದವರಿಗೆ ವಾಕ್ ಇನ್ ಸೌಲಭ್ಯ ನೀಡಲಾಗಿದೆ. ಜೂನ್ 25 ರವರೆಗೆ ದೇಶದಲ್ಲಿ 31 ಕೋಟಿ ಲಸಿಕೆ ಡೋಸ್ಗಳನ್ನು ನೀಡಲಾಗಿದ್ದು, ಒಟ್ಟು ವಯಸ್ಕ ಜನಸಂಖ್ಯೆಯ ಶೇಕಡ 5.6 ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಸುಮಾರು 56.24 ರಷ್ಟು ಗ್ರಾಮೀಣ ಜನಸಂಖ್ಯೆ ಈವರೆಗೆ ಲಸಿಕೆ ಪಡೆದಿದೆ ಎಂದು ಸರ್ಕಾರ ತಿಳಿಸಿದೆ.






