ನವದೆಹಲಿ : ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯಗೊಳಿಸುವುದು ಪ್ರಮುಖ ಮೈಲಿಗಲ್ಲಾಗಿದ್ದು, ಅದು ಶಾಲೆಗಳನ್ನು ಪುನಃ ತೆರೆಯುವುದಕ್ಕೆ ಮತ್ತು ಹೊರಾಂಗಣ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯ ಹೇಳಿದ್ದಾರೆ.
ಎರಡರಿಂದ 18 ವರ್ಷ ವಯೋಮಾನದವರ ಮೇಲಿನ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಲಸಿಕೆಯ ಪ್ರಯೋಗಗಳ ಡೇಟಾ ಸೆಪ್ಟೆಂಬರ್ ವೇಳೆಗೆ ಲಭ್ಯವಾಗಲಿದೆ. ಡೇಟಾ ಆಧರಿಸಿ, ಡ್ರಗ್ ನಿಯಂತ್ರಕರ ಅನುಮೋದನೆ ಸಿಕ್ಕರೆ, ಭಾರತದಲ್ಲಿ ಮಕ್ಕಳಿಗೆ ಕರೊನಾ ಲಸಿಕೆ ಲಭ್ಯವಾಗಲಿದೆ ಎಂದರು.
ಅದಕ್ಕಿಂತ ಮುಂಚೆ ಫೈಜರ್ ಲಸಿಕೆಗೆ ಅನುಮೋದನೆ ಸಿಕ್ಕರೆ, ಅದು ಕೂಡ ಮಕ್ಕಳಿಗೆ ಲಭ್ಯವಾಗುವ ಆಯ್ಕೆಯಾಗುತ್ತದೆ. ಇನ್ನು, ಜೈಡಸ್ ಕಾಡಿಲದವರು ತಮ್ಮ ಜೈಕೋವಿ-ಡಿ ಲಸಿಕೆಯನ್ನು ವಯಸ್ಕರಿಗೆ ಮತ್ತು ಮಕ್ಕಳಿಗೆ ನೀಡಬಹುದೆಂದು ತುರ್ತು ಬಳಕೆಗೆ ಅನುಮೋದನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅದೂ ಒಂದು ಆಯ್ಕೆಯಾಗಬಹುದು ಎಂದಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಶಿಕ್ಷಣದ ದೃಷ್ಟಿಯಿಂದ ಮಕ್ಕಳಿಗೆ ಭಾರೀ ನಷ್ಟವಾಗುತ್ತಿದ್ದು, ಶಾಲೆಗಳನ್ನು ಮತ್ತೆ ತೆರೆಯಬೇಕಾಗಿದೆ. ಇದರಲ್ಲಿ ಲಸಿಕಾಕರಣ ಮಹತ್ವದ ಪಾತ್ರ ವಹಿಸಲಿದೆ ಎಂದ ಡಾ. ಗುಲೇರಿಯ, ಮಕ್ಕಳಲ್ಲಿ ಬಹುತೇಕವಾಗಿ ಮೆದುಪ್ರಮಾಣದ ಸೋಂಕು ಕಾಣಿಸಿಕೊಳ್ಳುತ್ತದೆ. ಹಲವು ಬಾರಿ ಏಸಿಮ್ಟಮಾಟಿಕ್ ಆಗಿರುತ್ತದೆ ಮತ್ತು ಅವರು ವೈರಸ್ನ ವಾಹಕರಾಗುತ್ತಾರೆ ಎಂದಿದ್ದಾರೆ.






