ಕಾಸರಗೋಡು: ದಿನವೊಂದಕ್ಕೆ 55 ವಾರ್ಡ್ ಗಳಲ್ಲಿ 4125 ಮಂದಿಗೆ ಕೋವಿಡ್ ತಪಾಸಣೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ವಾಡೊರ್ಂದರಲ್ಲಿ 75 ಮಂದಿಯ ತಪಾಸಣೆ ನಡೆಯಲಿದೆ. ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.
ಕಾಸರಗೋಡು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಸೋಂಕು ಬಾಧಿತರು ಇರುವ ಪ್ರದೇಶಗಳನ್ನು ಪತ್ತೆಮಾಡಿ ಹೆಚ್ಚುವರಿ ಕಟ್ಟುನಿಟ್ಟುಗಳನ್ನು ಆಯಾ ತಾಣಗಳಲ್ಲೇ ನಿಗದಿ ಪಡಿಸುವ ನಿಟ್ಟಿನಲ್ಲಿ ಸ್ಟ್ರಾಂಗ್ ಮಲ್ಟಿ ಸ್ಟೇಜ್ ರಾಂಡಂ ಸಾಂಪ್ಲಿಂಗ್ ನಡೆಸಲಾಗುವುದು. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ತಪಾಸಣೆ ಕ್ರಮ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
8 ಆರೋಗ್ಯ ಬ್ಲೋಕ್ ಗಳಲ್ಲಿ 777 ವಾರ್ಡ್ ಗಳಿವೆ. ದಿನವೊಂದಕ್ಕೆ 55 ವಾರ್ಡ್ ಗಳಲ್ಲಿ 4125 ಮಂದಿಯ ತಪಾಸಣೆ ನಡೆಯಲಿದೆ. 14 ದಿನ ಕಳೆದು ಮತ್ತೆ ಕೋವಿಡ್ ತಪಾಸಣೆ ನಡೆಸಬೇಕಿದೆ. ಪೆÇಲೀಸರು, ಆಟೋರಿಕ್ಷಾ ಚಾಲಕರು, ಬಸ್ ಸಿಬ್ಬಂದಿ, ಅಂಗಡಿ ಮಾಲೀಕರು, ಅಂಗಡಿ, ಕಾರ್ಖಾನೆ, ವ್ಯಾಪಾರ ಸಂಸ್ಥೆಗಳ ನೌಕರರು, ಸರಕಾರಿ ಸಿಬ್ಬಂದಿ ಸಹಿತ ಸಾರ್ವಜನಿಕರೊಂದಿಗೆ ಬೆರೆಯುವ ಮಂದಿಗೆ ಈ ನಿಟ್ಟಿನಲ್ಲಿ ಕಡ್ಡಾಯ ತಪಾಸಣೆ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಸಹಕಾರ ಲಭ್ಯತೆ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರ, ಕಾರ್ಯಕರ್ತರಸಭೆ ತುರ್ತಾಗಿ ನಡೆಸುವಂತೆ ಪಂಚಾಯತ್ ಡೆಪ್ಯೂಟಿ ನಿರ್ದೇಶಕರಿಗೆ ಆದೇಶ ನೀಡಲಾಗಿದೆ.
ವಾಕ್ಸಿನೇಷನ್ ವಿಸ್ತೃತಗೊಳಿಸುವಂತೆ ಸಭೆ ಆದೇಶಿಸಿದೆ. ಜಿಲ್ಲೆಯ ವಯೋವೃದ್ಧ ಕೇಂದ್ರಗಳಲ್ಲಿ ಬುಧವಾರ ಪೂರ್ಣಗೊಂಡಿದೆ. ವಿಶೇಷಚೇತನರು, ಹಾಸುಗೆ ಹಿಡಿದಿರುವ ರೋಗಿಗಳು, ಸಾಂತ್ವನ ಶುಶ್ರೂಷೆ ಪಡೆಯುತ್ತಿರುವ ರೋಗಿಗಳು ಮೊದಲಾದವರಿಗೆ ಅವರ ಮನೆಗಳಿಗೇ ತೆರಳಿ ವಾಕ್ಸಿನ್ ನೀಡಲು ಉದ್ದೇಶಿಸಲಾಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಖಚಿತತೆ ಮೂಡಿಸಲು ಪೆÇಲೀಸರು, ಸೆಕ್ಟರಲ್ ಮೆಜಿಸ್ಟ್ರೇಟರು ನಡೆಸುತ್ತಿರುವ ಪರಿಶೀಲನೆ ಚುರುಕಿನಿಂದ ಮುಂದುವರಿಯಲಿದೆ.
ಕೋವಿಡ್ ಮೂರನೇ ಅಲೆಯ ಅವಧಿಯಲ್ಲಿ ಮಕ್ಕಳಿಗೆ ಹೆಚ್ಚು ಬಾಧೆಯುಂಟಾಗಲಿದೆ ಎಂದು ಆರೋಗ್ಯ ಪರಿಣತರು ಅಭಿಪ್ರಾಯಪಟ್ಟಿರುವ ಕಾರಣ ಕಾಞಂಗಾಡಿನ ಅಮ್ಮ ಮತ್ತು ಮಗು ಆಸ್ಪತ್ರೆಯಲ್ಲಿ 100 ಆಕ್ಸಿಜನ್ ಬೆಡ್ ಸಜ್ಜುಗೊಳಿಸಲು ಆದೇಶ ನೀಡಲಾಗಿದೆ. ಶಿಶುರೋಗ ಪರಿಣತರ ಸೇವೆ ಖಚಿತಪಡಿಸಬೇಕಿದೆ. ಜಿಲ್ಲಾ ಆಸ್ಪತ್ರೆ, ಟಾಟಾ ಆಸ್ಪತ್ರೆ, ಕಾಸರಗೊಡು ಸರಕಾರಿ ಮೆಡಿಕಲ್ ಕಾಲೇಜು, ಜನರಲ್ ಆಸ್ಪತ್ರೆ ಇತ್ಯಾದಿ ಕಡೆ ಅಗತ್ಯದ ಸಜ್ಜೀಕರಣ ನಡೆಸಲಾಗುವುದು. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಪೈಪ್ ಲೈನ್ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ.
ಕರಾವಳಿ, ಆದಿವಾಸಿ ವಲಯಗಳಲ್ಲಿ, ಪರಿಶಿಷ್ಟ ಜಾತಿ-ಪಂಗಡ ಕಾಲನಿಗಳಲ್ಲಿ ಕೋವಿಡ್ ವಾಕ್ಸಿನೇಷನ್ ಸ್ಪೆಷ್ಯಲ್ ಡ್ರೈವ್ ನಡೆಸಲಾಗುವುದು. ಜಿಲ್ಲೆಯ ಕೆಲವು ಕಾಲನಿಗಳಲ್ಲಿ ಕೋವಿಡ್ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನಜಾಗೃತಿ ನಡೆಸಲು ವಿಶೇಷ ಗಮನಹರಿಸಬೇಕು ಎಂದು ಸಭೆ ಆದೇಶಿಸಿದೆ.
ಕೇರಳ-ಕರ್ನಾಟಕ ಗಡಿ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಅಧಿಕಗೊಳ್ಳುತ್ತಿರುವ ವರದಿಗಳಿದ್ದು, ಅಂಥಾ ಪ್ರದೇಶಗಳಿಗೆ ಅಬಕಾರಿ ದಳ ದಾಳಿ ನಡೆಸಬೇಕು. ಉಭಯ ರಾಜ್ಯಗಳ ಅಬಕಾರಿ ದಳಗಳು ಜಂಟಿ ತಪಾಸಣೆ ನಡೆಸಲೂ ಆದೇಶಿಸಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್. ನಾಥ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಎ.ಎಸ್.ಪಿ. ಪ್ರಜೀಷ್ ತೋಟತ್ತಿಲ್, ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಕೆ.ಆರ್.ರಾಜನ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮೊದಲಾದವರು ಉಪಸ್ಥಿತರಿದ್ದರು.



