ಕಾಸರಗೋಡು: ರಾಜ್ಯದ ಅತಿ ದೊಡ್ಡ ಕೋಟೆಯಾಗಿರುವ ಬೇಕಲ ತನ್ನ ಹೊಳಪನ್ನು ಹೆಚ್ಚಿಸಿಕೊಂಡು ಆಕರ್ಷಣೆ ಪಡೆದಿದೆ.
ಆಮೂಲಾಗ್ರ ಸ್ವರೂಪವನ್ನು ಬದಲಿಸಿಕೊಂಡು ನೂತನ ಮುಖಭಾವದೊಂದಿಗೆ ಕೋಟೆ ಮತ್ತು ಆವರಣ ಪ್ರದೇಶ ಪ್ರವಾಸಿಗರನ್ನು ಸೆಳೆಯುತ್ತಿದೆ.
ಬೇಕಲ ಕೋಟೆಯ ಲೈಟ್ ಆಂಡ್ ಸೌಂಡ್ ಶೋ ಈಗಾಗಲೇ ದಾಖಲೆಯ ಮನ್ನಣೆ ಪಡೆದಿದೆ. ಇದೀಗ ಹೆಚ್ಚುವರಿ ಸೌಂದರ್ಯದೊಂದಿಗೆ ನಳನಳಿಸಿದರೆ, ಪಳ್ಳಿಕ್ಕರೆ ಬೀಚ್ ಕೂಡ ತನ್ನ ಮುಖಚರ್ಯೆ ಬದಲಿಸಿಕೊಂಡಿದೆ. ಈ ಬದಲಾವಣೆ ಪ್ರವಾಸಿಗರನ್ನು ನಿರೀಕ್ಷಿಸುತ್ತಿದೆ.
ಕೇರಳದ ಉತ್ತರ ಭಾಗ( ಮಲಬಾರ್) ಪ್ರದೇಶದ ಅತಿದೊಡ್ಡ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿದೆ ಬೇಕಲಕೋಟೆ. ಸುಮಾರು 400 ಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಈ ಕೋಟೆ ಕೇಂದ್ರ ಸರಕಾರ ಆಯ್ಕೆ ಮಾಡಿರುವ ಕೇರಳದ ಏಕೈಕ ಪ್ರವಾಸಿ ತಾಣವೂ ಆಗಿದೆ. ಪ್ರಾಕೃತಿಕ ಸೌಂದರ್ಯದೊಂದಿಗೆ ಸಮೀಪದ ಪಳ್ಳಿಕ್ಕರೆ ಬೀಚ್ ಕೂಡ ಪ್ರಧಾನ ಇಲ್ಲಿನ ಕೇಂದ್ರವಾಗಿದೆ. ಕರ್ನಾಟಕದ ಇತಿಹಾಸ ಸಂಕೇತವಾಗಿ, ಕೇರಳದ ಸೌಂದರ್ಯವನ್ನೂ ಉಳಿಸಿಕೊಂಡು ಕಾಸರಗೋಡು ಜಿಲ್ಲೆಯಲ್ಲಿ ತಲೆಎತ್ತಿನಿಂತಿರುವ ಬೇಕಲಕ್ಕೆ ತನ್ನದೇ ಆದ ಮಹತ್ವವಿದೆ.
ಇದೀಗ ಸ್ವಾಗತ ಕಮಾನದೊಂದಿಗಿನ ಪ್ರವೇಶ ದ್ವಾರ, ಹಾದಿ ಬದಿಯ ಸೌಂದರ್ಯೀಕರಣ ನಡೆಸಲಾಗಿದೆ. 2019 ಜೂನ್ ತಿಂಗಳಲ್ಲಿ ಈ ನಿಟ್ಟಿನಲ್ಲಿ 99, 94,176 ರೂ.ನ ಯೋಜನೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಮಂಜೂರಾತಿ ನೀಡಿತ್ತು. ತಾಂತ್ರಿಕ ಅನುಮತಿ ಲಭಿಸಿದ ತಕ್ಷಣ ನಿರ್ಮಾಣ ಚಟುವಟಿಕೆಗಳೂ ಆರಂಭಗೊಂಡಿದ್ದುವು. ಸ್ವಾಗತಕಮಾನ, ಆವರಣಗೋಡೆ, ಇಂಟರ್ ಲಾಕ್ ಹೊದೆಸಿದ ಕಾಲ್ನಡಿಗೆ ಹಾದಿ, ಟ್ರಾಫಿಕ್ ಸರ್ಕಲ್ ಇತ್ಯಾದಿ ಕಾಮಗಾರಿಗಳು ಯಥಾಸಮಯದಲ್ಲಿ ಪೂರ್ಣಗೊಂಡಿವೆ. ನಿರ್ಮಾಣದ ಹೊಣೆ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು. ಯೋಜನೆಯ ಅಂಗವಾಗಿ ಪ್ರವೇಶದ್ವಾರ, ಹಾದಿ ಬದಿ ಸೌಂದರ್ಯೀಕರಣ ನಿರ್ಮಾಣಗೊಂಡಿರುವುದು ಕೋಟೆಯ ಸೊಬಗನ್ನು ದ್ವಿಗುಣಿಗೊಳಿಸಿದೆ.
ಇನ್ನೂ ಜಾರಿಯಾಗಲಿವೆ ಯೋಜನೆಗಳು:
ಬೇಕಲ ಕೋಟೆಯ ವೀಕ್ಷ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ತಲಪಲು ಸುಗಮವಾಗುವ ರೀತಿ ಸೂಚನಾ ಫಲಕ, ಗುರುತುಗಳು ಇಲ್ಲದೇ ಇರುವುದು ಈ ಹಿಂದೆ ಸಮಸ್ಯೆಯಾಗಿತ್ತು. ಕಣ್ಣೂರಿನಿಂದ ಆಗಮಿಸುವ ಮಂದಿ ಉದುಮಾ ವರೆಗೆ, ಮಂಗಳೂರಿನಿಂದ ಬರುವವರು ಪಳ್ಳಿಕ್ಕರೆ ಬೀಚನ್ನೂ ದಾಟಿ ಹಾದಿತಪ್ಪಿ ಮುಂದುವರಿಯುವ ದುಸ್ಥಿತಿ ಅಂದು ಇತ್ತು. ಇದಕ್ಕೆ ಶಾಶ್ವತ ಪರಿಹಾರವಾಗಿ ಗಮನಸೆಳೆಯುವ ಸ್ವಾಗತ ಕಮಾನ ನಿರ್ಮಾಣಗೊಂಡಿದೆ. ಇದೀಗ ರಾತ್ರಿ ಕಾಲದಲ್ಲೂ ಗಮನ ಸೆಳೆಯುವ ರೀತಿಯ ಹಾದಿದೀಪಗಳು ಇತ್ಯಾದಿ ಅನುಷ್ಠಾನಗೊಂಡಿವೆ.
ಈ ಯೋಜನೆಯ ಅಂಗವಾಗಿ ಶುಚಿಕೊಠಡಿ ಸೌಲಭ್ಯ ಸಹಿತದ ಎರಡು ಬಸ್ ಕಾಯುವ ಕೇಂದ್ರ ಶೀರ್ಘರದಲ್ಲೇ ನಿರ್ಮಾಣಗೊಳ್ಳಲಿದೆ. ಜೊತೆಗೆ ಕಿಯಾಸ್ಕ್ ಕೂಡ ಸ್ಥಾಪನೆಗೊಳ್ಳಲಿದೆ. ಅಲ್ಲಿ ಚಹಾ, ಲಘು ಉಪಹಾರ ಇತ್ಯಾದಿಗಳು ಲಭ್ಯವಾಗಲಿವೆ. ಕಿಯಾಸ್ಕ್ ನಡೆಸುವ ಮಂದಿಗೆ ಶುಚಿಕೊಠಡಿಯ ಶುಚಿತ್ವದ ಹೊಣೆಯನ್ನೂ ವಹಿಸಲಾಗುವುದು. ಈ ಯೋಜನೆ ಸಂಬಂಧ ಚಟುವಟಿಕೆಗಳು ಪ್ರಗತಿಯಲ್ಲಿವೆ ಎಂದು ಡಿ.ಟಿ.ಪಿ.ಸಿ. ಕಾರ್ಯದರ್ಶಿ ಬಿಜು ರಾಘವನ್ ತಿಳಿಸಿದರು.
ಬಿ.ಆರ್.ಡಿ.ಸಿ. ನೇತೃತ್ವದಲ್ಲಿ ಬೇಕಲ ಲೋಕೋಪಯೋಗಿ ರಸ್ತೆಯಲ್ಲಿ ಒಂದು ಮಿಯಾವಾಕಿ ಅರಣ್ಯೀಕರಣ ನಿರ್ಮಿಸಲಾಗಿದೆ. ನೋಟಗರಿಗೆ ಹೊಸತನ ನೀಡುವ ರೀತಿ ಇದು ನಿರ್ಮಾಣಗೊಂಡಿದೆ.ಬೇಕಲ ಕೋಟೆಯಿಂದ ಬೀಚ್ ವರೆಗಿನ ರಸ್ತೆಯ 300 ಮೀಟರ್ ಅಂತರದಲ್ಲಿ ಇಂಟರ್ ಲಾಕ್ ಹೊದೆಸಲಾಗಿದೆ. ಮೆಕ್ ಡಾಂ ರಸ್ತೆಯ ಡಾಮರೀಕರಣವೂ ನಡೆದಿದೆ. ಟೈಲ್ಸ್ ಹೊದೆಸಿದ ಕಾಲ್ನಡಿಗೆ ಹಾದಿಯೂ ಸಿದ್ಧವಾಗಿದೆ. ಲಾಂಡ್ ಸ್ಕೇಪ್ ಕೂಡ ಜರುಗಿದೆ. ಕೆ.ಎಸ್.ಟಿ.ಪಿ. ರಸ್ತೆಯಿಂದ ಬೀಚ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಇಂಟರ್ ಲಾಕ್ ಹೊದೆಸಿರುವ ಕಾಲ್ನಡಿಗೆ ಹಾದಿ,ಉದ್ಯಾನ ಇತ್ಯಾದಿಗಳ ಕಾಮಗಾರಿ ಪ್ರಗತಿಯಲ್ಲಿದೆ.
ರಾಜ್ಯ ಹೆದ್ದಾರಿಯಿಂದ ಅಂಡರ್ ಬ್ರಿಜ್ ವರೆಗೆ 30 ಲಕ್ಷ ರೂ. ವೆಚ್ಚದ ಯೋಜನೆ, ನಂತರ ಬೀಚ್ ವರೆಗಿನ ರಸ್ತೆ ಅಭಿವೃದ್ಧಿಗೆ 40 ಲಕ್ಷ ರೂ. ಬಜೆಟ್, ಒಂದು ಬೀಚ್ ನಿಂದ ಇನ್ನೊಂದು ಬೀಚ್ ವರೆಗಿನ ರಸ್ತೆಯ ಇಂಟರ್ ಲಾಕ್ ಹೊದೆಸುವಿಕೆ ಈಗಾಗಲೇ ಪೂರ್ಣಗೊಂಡಿದೆ. ಇದಕ್ಕಾಗಿ 1.30 ಕೋಟಿ ರೂ. ವೆಚ್ಚವಾಗಿದೆ. ಪಳ್ಳಿಕರೆ ಬೀಚ್ ನಲ್ಲಿ ಬೀಚ್ ಆರ್ಟ್ ಸಹ ನಡೆಸಲಾಗಿದೆ. ಇಲ್ಲಿ 300 ಮೀಟರ್ ಉದ್ದದ ಸಮುದ್ರದ ತೆರೆಯ ರೂಪ ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಆರ್ಟ್ ವಾಲ್ ನಿರ್ಮಿಸಲಾಗಿದೆ. ಶೀಘ್ರದಲ್ಲಿ ಈ ವಾಲ್ ನಲ್ಲಿ ಮ್ಯೂರಲ್ ಚಿತ್ರಗಳ ರಚನೆ ನಡೆಯಲಿದೆ.
5 ಕೋಟಿ ರೂ. ವೆಚ್ಚದ ನವೀಕರಣ ಯೋಜನೆ ಆಲೋಚನೆಯಲ್ಲಿದೆ. ಬೀಚ್ ನ ಒಳಾಂಗಣದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಮಿಯಾವಾಕಿ ಅರಣ್ಯ ನಿರ್ಮಿಸಲಾಗಿದೆ. ಕೆ.ಎಸ್.ಟಿ.ಪಿ.ರಸ್ತೆಯ ಡಿವೈಡರ್ ನಲ್ಲಿ ಮರವಾಗಿ ಬೆಳೆಯಬಲ್ಲ ಸಸಿಗಳನ್ನು ನೆಡಲಾಗಿದೆ. 2 ವರ್ಷದ ಅವಧಿಯಲ್ಲಿ ಬೀಚ್ ಗೆ ಆಗಮಿಸುವ ಪ್ರವಾಸಿಗರಿಗೆ ಸೌಂದರ್ಯದೊಂದಿಗೆ ಸುಗಂಧವನ್ನೂ ಒದಗಿಸುವ ಮರಗಳನ್ನೂ ಇಲ್ಲಿ ನೆಡಲಾಗಿದೆ ಎಂದು ಬಿ.ಆರ್.ಡಿ.ಸಿ. ಸಹಾಯಕ ಪ್ರಬಂಧಕ ಸುನಿಲ್ ತಿಳಿಸಿರುವರು.






