ಕಾಸರಗೋಡು: "ನಾವು ಅಲ್ಲಿಗೆ ತೆರಳುವ ವೇಳೆ ಅವರ ಕಂಗಳಲ್ಲಿ ಮೊದಲು ಅದ್ಭುತವನ್ನು ಕಂಡವರಂತೆ ಭಾಸವಾಗಿತ್ತು. ನಂತರವದು ಕಣ್ಣೀರಾಗಿ ಪರಿವರ್ತನೆಗೊಂಡಿತ್ತು. ಅವರಿಗೆ ಇದು ಎಂದಿಗೂ ನಿರೀಕ್ಷಿತವಾಗಿರಲಿಲ್ಲ. ನನಗಿದು ಯಾವತ್ತೂ ಮರೆಯಲಾರದ ಅನುಭವ".....ಇದು ದೇಲಂಪಾಡಿ ಗ್ರಾಮ ಪಂಚಾಯತ್ ನ ಮಲ್ಲಂಪಾರೆಯಲ್ಲಿ ಜರುಗಿದ ವೈದ್ಯಕೀಯ ಶಿಬಿರ ಮುಗಿಸಿ ಮರಳಿದ ಡಾ.ಮುಹಮ್ಮದ್ ಷಿರಾಸ್ ಅವರ ಮಾತುಗಳಿವು.
6 ಕಿ.ಮೀ. ವನಾಂತರದಲ್ಲಿ ಜೀಪಿನಲ್ಲಿ, ನಂತರ 12 ಕಿ.ಮೀ. ಕಾಲ್ನಡಿಗೆಯಿಂದಲೇ ಸಾಗಿ ಪ್ರತಿ ಮನೆಗಳಿಗೆ ತೆರಳಿ ಕೋವಿಡ್ ಚಿಕಿತ್ಸೆ ನೀಡಿದ್ದ ಅನುಭವ ಅವರ ಮಾತುಗಳಲ್ಲಿ ತುಂಬಿಕೊಂಡಿತ್ತು. ಡಾ.ಮುಹಮ್ಮದ್ ಷಿರಾಸ್, ಸ್ಟಾಫ್ ನರ್ಸ್ ಗಳಾದ ಸೀಮಾ ಮೋಹನ್, ಅಶ್ವತಿ, ಸುನಿತಾ ಮೊದಲಾದವರು ಸೇರಿರುವ ಕೋವಿಡ್ ಬಾಟಲ್ ತಂಡ ರೋಗಿಗಳ ಶುಶ್ರೂಷೆ ನಡೆಸಿದ್ದ ರೀತಿಯಿದು.
ಕೋವಿಡ್ ಮಹಾಮಾರಿ ಅನಿಯಂತ್ರಿತವಾಗಿ ಮುಂದುವರಿಯುತ್ತಿರುವ ಅವಧಿಯಲ್ಲೂ ಜಾಗೃತಿ ಮತ್ತು ಪ್ರತಿರೋಧದಲ್ಲಿ ವಿಭಿನ್ನ ಮಾದರಿಯಾಗಿ ಕಾರಡ್ಕ ಬ್ಲೋಕ್ ನ ಕೋವಿಡ್ ಬಾಟಲ್ ಟೀಂ ಡೋಮಿಸಿಲರಿ ಕೇರ್ ಸೆಂಟರ್ ಗಳಲ್ಲಿ ದಾಖಲಾಗಿರುವ ರೋಗಿಗಳನ್ನು ತಪಾಸಣೆ ನಡೆಸಿ, ಶುಶ್ರೂಷೆ ನಡೆಸುವ ನಿಟ್ಟಿನಲ್ಲಿ ಮೇ 17ರಂದು ಕಾರಡ್ಕ ಬ್ಲೋಕ್ ಪಂಚಾಯತ್ ಆರಂಭಿಸಿರುವ ಯೋಜನೆಯೇ ಕೋವಿಡ್ ಬಾಟಲ್ ಟೀಂ.
ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರಯ ಒಬ್ಬ ಡಾಕ್ಟರ್, ಮೂವರು ದಾದಿಯರು ಸೇರಿರುವ ತಂಡ ಈ ಚಟುವಟಿಕೆಗಳಿಗೆ ನೇತೃತ್ವ ವಹಿಸುತ್ತಿದೆ. ದಿನ ಬಿಟ್ಟು ದಿನ ಈ ತಂಡ ಡಿಸಿಸಿಗಳನ್ನು ಸಂದರ್ಶಿಸುತ್ತಿದೆ. ಕಾರಡ್ಕ ಬ್ಲಾಕ್ ಪಂಚಾಯತ್ ವ್ಯಾಪ್ತಿಯ 7 ಗ್ರಾಮ ಪಂಚಾಯತ್ ಗಳ 52 ಮಂದಿ ಡಿಸಿಸಿಗಳಲ್ಲಿ ದಾಖಲಾಗಿದ್ದಾರೆ. ಡಿಸಿಸಿಗಳ ಬಹುತೇಕ ರೋಗಿಗಳು ಖಿನ್ನತೆಗೊಳಗಾಗಿರುವುದೂ ಪತ್ತೆಯಾಗಿದೆ. ಉಲ್ಭಣಾವಸ್ಥೆಯಲ್ಲಿ ಇಲ್ಲದೇ ಇರುವ ರೋಗಿಗಳನ್ನು ದಾಖಲಿಸುವ ಡಿಸಿಸಿಗಳಲ್ಲಿ ಕೋವಿಡ್ ಬಾಟಲ್ ಟೀಂ ತಲಪಿದ ವೇಳೆ ಅದು ರೋಗಿಗಳಿಗೆ ಬಲು ಸಂತಸ ತಂದಿದೆ ಎಂದು ಮುಳಿಯಾರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಮೇಲ್ವಿಚಾರಕ ಎ.ಕೆ.ಹರಿದಾಸ್ ತಿಳಿಸಿದರು.
ಸಕ್ರಿಯವಾಗಿದೆ ಮೊಬೈಲ್ ಮೆಡಿಕಲ್ ಯೂನಿಟ್
ಕೋವಿಡ್ ಬಾಟಲ್ ಟೀಂನ ಜೊತೆ ಮೊಬೈಲ್ ಮೆಡಿಕಲ್ ಯೂನಿಟ್ ಕೂಡ ಕಾರಡ್ಕ ಬ್ಲೋಕ್ ನಲ್ಲಿ ಸಕ್ರಿಯವಾಗಿ ಚಟುವಟಿಕೆ ನಡೆಸುತ್ತಿದೆ. ಬ್ಲೋಕ್ ವ್ಯಾಪ್ತಿಯ 7 ಗ್ರಾಮ ಪಂಚಾಯತ್ ಗಳ ವಿವಿಧ ವಾರ್ಡ್ ಗಳಲ್ಲಿ ಮೊಬೈಲ್ ಮೆಡಿಕಲ್ ಯೂನಿಟ್ ಕೋವಿಡ್ ಟೆಸ್ಟ್ ಶಿಬಿರ ನಡೆಸುತ್ತಿದೆ. ಪ್ರತಿ ಪ್ರದೇಶದ ವಿಶೇಷ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ರಚಿಸಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ವಿಶ್ಲೇಷಿಸಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಚಟುವಟಿಕೆಗಳನ್ನು ವಿಭಿನ್ನ ರೀತಿ ಅನುಷ್ಠಾನಗೊಳಿಸುವುದು ಸಾರ್ವಜನಿಕರಿಗೆ ನೂತನ ನಿರೀಕ್ಷೆ ಮೂಡಿಸುತ್ತಿದೆ ಎಂದು ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಅಭಿಪ್ರಾಯಪಟ್ಟರು.


