ಬದಿಯಡ್ಕ: ರಾಜ್ಯಾದ್ಯಂತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅನಿಯಮಿತ ಪೆಟ್ರೋಲ್ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಕೇರಳ ಪ್ರದೇಶ ಕಾಂಗ್ರೆಸ್ಸ್ ಸಮಿತಿ ಕರೆ ನೀಡಿದ್ದ ಧರಣಿ ಮುಷ್ಕರದಂತೆ ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ಸ್ ನೇತೃತ್ವದಲ್ಲಿ ಬದಿಯಡ್ಕ ಅಂಚೆ ಕಚೇರಿ ಮುಂದೆ ಬುಧವಾರ ಧರಣಿ ನಡೆಯಿತು.
ಬದಿಯಡ್ಕ ಮಂಡಲ ಕಾಂಗ್ರೆಸ್ಸ್ ಉಪಾಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ ಧರಣಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೇಂದ್ರ ಸರ್ಕಾರವು ದಿನನಿತ್ಯ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಏರಿಸಿ ಶತಕ ಸಂಭ್ರಮ ಆಚರಿಸುತ್ತಿದೆ ಎಂದು ಲೇವಡಿಗೈದರು. ಕೊರೊನಾ ಸಂಕಷ್ಟದ ಈ ಸಂದರ್ಭ ಜನಜೀವನ ದುಸ್ಥಿತಿಗೆ ತಲಪಿದೆ. ಸರ್ಕಾರ ಕಾರ್ಪೋರೇಟರ್ ಗಳ ಕಪಿಮುಷ್ಠಿಯಲ್ಲಿದೆ ಎಂದವರು ತಿಳಿಸಿದರು.
ಬದಿಯಡ್ಕ ಮಂಡಲ ಯೂತ್ ಕಾಂಗ್ರೆಸ್ಸ್ ಅಧ್ಯಕ್ಷ ಶಾಫಿ ಪಯ್ಯಲಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಕಾಂಗ್ರೆಸ್ಸ್ ಪ್ರಧಾನ ಕಾರ್ಯದರ್ಶಿ ಶಾಫಿ ಗೋಳಿಯಡ್ಕ, ಯೂತ್ ಕಾಂಗ್ರೆಸ್ಸ್ ಪದಾಧಿಕಾರಿಗಳಾದ ಶ್ರೀನಾಥ್, ಇಲ್ಯಾಸ್, ಸೈಫುದ್ದೀನ್ ಮೊದಲಾದವರು ಧರಣಿಯ ನೇತೃತ್ವ ವಹಿಸಿದ್ದರು. ಕೃಷ್ಣಕುಮಾರ್ ಭಟ್ ಸ್ವಾಗತಿಸಿ, ವಂದಿಸಿದರು.


