ಕಾಸರಗೋಡು: ಪ್ರತಿ ವಾರದ ಕೋವಿಡ್ ಟೆಸ್ಟ್ ಸಂಖ್ಯೆಯನ್ನು 4 ಸಾವಿರ ಆಗಿ ಹೆಚ್ಚಳಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ನುಡಿದರು.
ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಟಿ.ಪಿ.ಆರ್. ಕಡಿಮೆಗೊಳಿಸುವುದು ಪ್ರಧಾನ ಉದ್ದೇಶವಾಗಿದೆ. ಕಳೆದ ಬಾರಿ 33075 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿರುವವರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕು. ಕರ್ನಾಟಕ ಯಾತ್ರೆ ಸಂಬಂಧ ಮಂಗಳೂರಿನ ಆಡಳಿತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸಾರ್ವಜನಿಕರೊಂದಿಗೆ ಅತ್ಯಧಿಕ ಸಂಪರ್ಕ ಹೊಮದಿರುವ ಆರೋಗ್ಯ ಕಾರ್ಯಕರ್ತರು, ಸರಕಾರಿ ಸಿಬ್ಬಂದಿ, ವ್ಯಾಪಾರಿಗಳು ಮೊದಲಾದವರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಕೋವಿಡ್ ತಪಾಸಣೆಗೆ ಒಳಗಾಗಬೇಕು. ಪ್ರತಿ ಪ್ರದೇಶಗಳಲ್ಲಿ ಜನಸಂಖ್ಯೆಗನುಗುಣವಾಗಿ ತಪಾಸಣೆ ನಡೆಸಲಾಗುವುದು. ಟಿ.ಪಿ.ಆರ್. ಪ್ರಕಾರ ಸ್ಥಳೀಯಾಡಳಿತ ಸಂಸ್ಥೆಗಳನ್ನು ವಿಂಗಡಿಸುವ ಕ್ರಮ ಮುಂದುವರಿಸಲಾಗುವುದು ಎಂದವರು ತಿಳಿಸಿದರು.
ವ್ಯಾಪಾರಿಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜು.19 ರಂದು ವ್ಯಾಪಾರಿ ವ್ಯವಸಾಯಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ವಾಕ್ಸಿನೇಷನ್ ಡ್ರೈವ್ ನಡೆಸಲಾಗುವುದು. ನಿಖರ ಯೋಜನೆಗಳೊಂದಿಗೆ ಪರಿಶಿಷ್ಟ ಜಾತಿ-ಪಂಗಡ, ಆದಿವಾಸಿ ವಲಯಗಳಲ್ಲಿ ಹಿರಿಯ ಪ್ರಜೆಗಳಿಗೆ ಆದ್ಯತೆ ನೀಡಿ ಲಸಿಕೆ ನೀಡಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ನುಡಿದರು.





