ಕಾಸರಗೋಡು: 79ನೇ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ಪೈಲೆಟ್ ಸರ್ವೇ ಜು.15ರಿಂದ ಆರಂಭಗೊಳ್ಳಲಿದೆ. ಆರೋಗ್ಯ, ಶಿಕ್ಷಣ, ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಎಂಬ ಮೂರು ಮೊಡ್ಯೂಲ್ ಗಳು ಸೇರಿರುವ ವಾರ್ಷಿಕ ಮೊಡ್ಯೂಲರ್ ಸರ್ವೇ, ಆಯುಷ್ ಸರ್ವೇ 79ನೇ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ಅಳವಡಗೊಂಡಿದೆ. ಮಾಹಿತಿ ಸಂಗ್ರಹದ ಅವಧಿ, ವಿವಿಧ ಪ್ರಶ್ನಾವಳಿಗಳ ಕ್ರಮ, ಸಸೂತ್ರ ಮಾಹಿತಿ ಸಂಗ್ರಹ ಇತ್ಯಾದಿ ವಿಚಾರಗಳನ್ನು ಪರಿಶೀಲಿಸಲು ಪೈಲೆಟ್ ಸಮೀಕ್ಷೆ ನಡೆಸಲಾಗುತ್ತದೆ.
ಕುಟುಂಬದ ಪ್ರತಿ ಸದಸ್ಯರ ಶಿಕ್ಷಣ ಮಟ್ಟ, ವಿವಿಧ ಅರ್ಹತೆಗಳು ಪ್ರತ್ಯೇಕ ನಮೂದನೆಗೊಳ್ಳಲಿವೆ. ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳ ಬಳಕೆ, ಇಂಟರ್ ನೆಟ್ ನ ವಿವಿಧ ರೀತಿಯ ಉಪಯೋಗ ಸಂಬಂಧ ಕುಟುಂಬದ ಸದಸ್ಯರ ಸಾಮಥ್ರ್ಯ, ಆಯುರ್ವೇದ, ಯುನಾನಿ, ಯೋಗ ಸಹಿತ ಆಯುಷ್ ವಿವಿಧ ವಿಭಾಗಗಳಲ್ಲಿ ಕುಟುಂಬದ ಪ್ರತಿ ಸದಸ್ಯರು ನಡೆಸಿರುವ ಚಿಕಿತ್ಸೆ ಮತ್ತು ವೆಚ್ಚಗಳ ಮಾಹಿತಿ, ಗರ್ಭಿಣಿ ಯಾಗಿದ್ದ ಅವಧಿ, ಹೆರಿಗೆಯ ನಂತರದ ನಡೆಸಿದ ಆಯುಷ್ ಚಿಕಿತ್ಸೆಗಳು ಇತ್ಯಾದಿ ವಿಚಾರಗಳನ್ನು ಪೈಲೆಟ್ ಸರ್ವೆ ಯಲ್ಲಿ ಸಂಗ್ರಹಿಸಲಾಗುವುದು. ಪೈಲೆಟ್ ಸರ್ವೇ ಕೋವಿಡ್ ಹರಡುವಿಕೆ ಕಡಿಮೆಯಿರುವ ಪ್ರದೇಶಗಳ 32 ಮನೆಗಳಲ್ಲಿ ಒಂದು ವಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಜುಲೈ ಯಲ್ಲಿ ಆರಂಭಗೊಳ್ಳಬೇಕಿದ್ದ 79ನೇ ಸಾಮಾಜಿಕ- ಆರ್ಥಿಕ ಸಮೀಕ್ಷೆ2 ತಿಂಗಳ ನಂತರ ಆರಂಭಿಸಲಾಗುವುದು ಎಂದು ಕೋಯಿಕೋಡ್ ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ ಡೈರೆಕ್ಟರ್ ಎಫ್. ಮುಹಮ್ಮದ್ ಯಾಸಿರ್ ತಿಳಿಸಿದರು.




