ಕಾಸರಗೋಡು: ಕಾವ್ಯ ಮತ್ತು ರಂಗಭೂಮಿಯ ಸಂಬಂಧ ಅವಿನಾಭಾವವಾದುದು. ಮೂಲದಲ್ಲಿ ಒಂದಕ್ಕೊಂದು ಅನ್ಯೋನ್ಯವಾಗಿದ್ದ ಈ ಸಂಬಂಧವು ಕಾರಣಾಂತರದಿಂದ ಕಳಚಿಕೊಂಡಿದ್ದರೂ, ಕಾವ್ಯಾನುಸಂಧಾನ ಕಾರ್ಯಕ್ರಮ ಪ್ರಾಮುಖ್ಯ ಪಡೆದಿರುವುದಾಗಿ ಖ್ಯಾತ ಕವಿ, ನಾಟಕಕಾರ ಎಚ್ ಎಸ್ ಶಿವಪ್ರಕಾಶ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಕನ್ನಡ ವಿಭಾಗವು ಆಯೋಜಿಸಿದ 'ಕಾವ್ಯಾನುಸಂಧಾನ-ವಾಚಿಕದ ನೆಲೆಗಳು' ಎಂಬ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾವ್ಯದ ಓದು ಸಹೃದಯನಿಗೆ ವಿಶೇಷವಾದ ಸುಖವನ್ನು ನೀಡುತ್ತದೆ. ಇದು ಜೀವನದ ಇನ್ನಿತರ ಸುಖಗಳಿಗಿಂತ ಭಿನ್ನವಾದುದು. ವಿಶೇಷ ರೂಪದ ಸುಖವನ್ನು ಸಹೃದಯನಿಗೆ ನೀಡುವುದೇ ಕಾವ್ಯದ ಶಕ್ತಿಯಾಗಿದೆ. ಕವಿಯು ಭಾಷೆಯನ್ನು ಬಳಸುವ ರೀತಿಯಲ್ಲಿ ಕಾವ್ಯವು ಧ್ವನಿಪೂರ್ಣವಾಗಿರುತ್ತದೆ. ಕಾವ್ಯವನ್ನು ಮೊದಲು ಅನುಭವಿಸುವುದನ್ನು ಕಲಿಯಬೇಕು, ನಂತರ ವಿಮರ್ಶೆ ಮಾಡಬೇಕು. ಕಾವ್ಯವನ್ನು ಸಂಕುಚಿತ ಓದಿಗೆ ಸೀಮಿತಗೊಳಿಸದೆ ಅದರ ಅನುಭವವನ್ನು ಸಹೃದಯತೆಯ ನೆಲೆಯಲ್ಲಿ ಗ್ರಹಿಸುವುದು ಮುಖ್ಯ ಎಂದು ತಿಳಿಸಿದರು.
ಕಾವ್ಯಾನುಸಂಧಾನ ಶಿಬಿರದ ನಿರ್ದೇಶಕ, ರಂಗಕರ್ಮಿ ಡಾ.ಶ್ರೀಪಾದ ಭಟ್ ಮಾತನಾಡಿ, ಶಿಬಿರದ ಒಟ್ಟು ರೂಪುರೇಷೆಯ ಬಗ್ಗೆ ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು. ಕಾವ್ಯವನ್ನು ಪ್ರವೇಶಿಸಲು ಬೇಕಾಗಿರುವ ಪರಿಕರಗಳ ಕುರಿತು ಮಾತನಾಡಿದರು.ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ಸ್ನಾತಕೋತ್ತರ ವಿದ್ಯಾರ್ಥಿ ಗಿರೀಶ್ ಎಂ., ಸ್ವಾಗತಿಸಿದರು. ನಿವೇದಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ನಿಶ್ಮಿತಾ ವಂದಿಸಿದರು.





