ಕಾಸರಗೋಡು: ಕಾಸರಗೋಡು ಜಿಲ್ಲಾಧಿಕಾರಿ ಕಾರಿಯಾಗಿ ಭಂಡಾರಿ ಸ್ವಾಗತ್ ರಣ್ವೀರ್ ಚಂದ್ ಕಚೇರಿಗೆ ಮಂಗಳವಾರ ಆಗಮಿಸಿದ ಅವರು ಬೆಳಗ್ಗೆ 10.45ಕ್ಕೆ ಹೊಣೆಗಾರಿಕೆ ವಹಿಸಿಕೊಂಡರು.
ಬಡ್ತಿ ಪಡೆದು ವರ್ಗಾವಣೆಗೊಳ್ಳುತ್ತಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಹೂಗುಚ್ಛ ನೀಡಿ ನೂತನ ಜಿಲ್ಲಾಧಿಕಾರಿಯನ್ನು ಸ್ವಾಗತಿಸಿ, ಅಧಿಕಾರ ಹಸ್ತಾಂತರಿಸಿದರು. ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಕಾಸರಗೋಡು ವಲಯ ಕಂದಾಯಾಧಿಕಾರಿ ಅತುಲ್ ಸ್ವಾಮಿನಾಥ್ ಮೊದಲಾದವರು ಉಪಸ್ಥಿತರಿದ್ದರು.
ಕೋವಿಡ್ ನಿಯಂತ್ರಣ ಚಟುವಟಿಕೆಗಳಿಗೆ ಆದ್ಯತೆ: ನೂತನ ಜಿಲ್ಲಾಧಿಕಾರಿ
ಕಾಸರಗೋಡು ಜಿಲ್ಲಾಧಿಕಾರಿ ಎಂಬ ನೆಲೆಯಲ್ಲಿ ನಡೆಸುವ ಚಟುವಟಿಕೆಗಳಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡುವೆ ಎಂದು ನೂತನ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಮಂಗಳವಾರ ಪದಗ್ರಹಣ ನಡೆಸಿದ ಅವರು ಮಾತನಾಡಿದರು.
ಕೊವಿಡ್ ತಪಾಸಣೆ, ಐಸೊಲೇಷನ್ ಚಟುವಟಿಕೆಗಳು, ಸಂಪರ್ಕ ಮೂಲ ಪತ್ತೆ, ಚಿಕಿತ್ಸಾ ಸೌಲಭ್ಯ ಇತ್ಯಾದಿ ವಿಚಾರಗಳಲ್ಲಿ ವಿಶೇಷ ಗಮನ ಹರಿಸುವುದಾಗಿ ತಿಳಿಸಿದರು. ಸದ್ರಿ ಶೇ 49 ಫಸ್ಟ್ ಡೋಸ್ ವಾಕ್ಸಿನೇಷನ್ ಪೂರ್ಣಗೊಂಡಿದೆ. ದ್ವಿತೀಯ ಹಂತದಲ್ಲಿ ಶೇ 17 ಪೂರ್ಣಗೊಂಡಿದೆ. ಬುಡಕಟ್ಟು ಜನಾಂಗ ವಲಯದಲ್ಲಿ 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ವಾಕ್ಸಿನೇಷನ್ ಶೇ 78 ಪೂರ್ಣಗೊಂಡಿದೆ ಎಂದವರು ತಿಳಿಸಿದರು.
ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಅತುಲ್ ಎಸ್.ನಾಥ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಹಣಕಾಸು ಅಧಿಕಾರಿ ಕೆ.ಸತೀಶನ್, ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು.





