ತಿರುವನಂತಪುರ: ಕೋವಿಡ್-19 ಸಾಂಕ್ರಾಮಿಕ ನಿರ್ಬಂಧಗಳ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಮುಚ್ಚಿದ್ದ ಶಬರಿಮಲೆ ಅಯ್ಯಪ್ಪ ದೇಗುಲ ಇಂದಿನಿಂದ (ಜುಲೈ 16) ತೆರೆಯಲಿದ್ದು, ಶನಿವಾರ ಮುಂಜಾನೆಯಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸೂಕ್ತ ಕೋವಿಡ್ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದೇವಾಲಯ ಆವರಣದಲ್ಲಿ ಭಕ್ತರ ನಡವಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಮಾರ್ಗಸೂಚಿ ನೀಡಿವೆ.
ಜುಲೈ 17ರಿಂದ 21ರವರೆಗೆ ಮಾಸಿಕ ವಿಧಿವಿಧಾನಗಳಿಗಾಗಿ ದೇವಾಲಯ ತೆರೆಯಲಿದೆ ಎಂದು ಉನ್ನತ ಮೂಲಗಳು ಹೇಳಿವೆ. ಮಾಸಿಕ ಆಚರಣೆಗಳಿಗಾಗಿ ದೇವಾಲಯವನ್ನು ತಿಂಗಳ ಕೆಲ ನಿರ್ದಿಷ್ಟ ದಿನಗಳಲ್ಲಿ ತೆರೆದರೂ ಕೋವಿಡ್-19 ನಿರ್ಬಂಧಗಳಿಂದಾಗಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರಲಿಲ್ಲ. ಲಾಕ್‌ಡೌನ್ ಅವಧಿಯಲ್ಲಿ ತನ್ನ ಅಧೀನದಲ್ಲಿರುವ 1,200 ದೇವಾಲಯಗಳಿಗೆ ಭಕ್ತರು ಪ್ರವೇಶಿಸದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಬಂಧ ವಿಧಿಸಿತ್ತು. ಆದಾಗ್ಯೂ ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಂಡಿತ್ತು.
ಶುಕ್ರವಾರದ ಬಳಿಕ ಆರಂಭವಾಗುವ ಮಾಸಿಕ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸುವ ಭಕ್ತರಿಗೆ ಅಯ್ಯಪ್ಪ ದೇಗುಲದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿದೆ. ಆನ್‌ಲೈನ್ ಸರದಿಯನ್ನು ಅನುಸರಿಸಿ ದರ್ಶನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ. ಎಲ್ಲ ಭಕ್ತಾದಿಗಳು ಕಡ್ಡಾಯವಾಗಿ 48 ಗಂಟೆಗಳ ಹಿಂದೆ ನೀಡಿದ ನೆಗೆಟಿವ್ ಆರ್‌ಟಿ-ಪಿಸಿಆರ್ ಕೋವಿಡ್-19 ಪರೀಕ್ಷಾ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ ಎಂದು ಟಿಡಿಬಿ ಅಧಿಕಾರಿಗಳು ಹೇಳಿದ್ದಾರೆ. ಮಾಸಿಕ ಧಾರ್ಮಿಕ ಆಚರಣೆಗಳ ಬಳಿಕ ಈ ತಿಂಗಳ 21ರಂದು ದೇವಾಲಯ ಮತ್ತೆ ಮುಚ್ಚಲಾಗುತ್ತದೆ.





