ಉಪ್ಪಳ: ಕಡಲ್ಕೊರೆತದಿಂದ ಉಂಟಾಗುವ ನಾಶವನ್ನು ತಡೆಯಲು ನಿರ್ಮಿಸಿದ ಕಗ್ಗಲ್ಲಿನ ತಡೆಗೋಡೆ ಕುಸಿದು ಸಮುದ್ರಪಾಲಗಿದ್ದು, ಇದರಿಂದ ಮೀನು ಕಾರ್ಮಿಕರು ಆತಂಕಗೊಂಡಿದ್ದಾರೆ. ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ಬಳಿಯ ಶಾರದಾನಗರ ಹಾಗೂ ಪರಿಸರ ಪ್ರದೇಶದ ಜನರಲ್ಲಿ ಆತಂಕ ಉಂಟಾಗಿದೆ. ಇಲ್ಲಿನ ಶರದಾ ಭಜನಾ ಮಂದಿರ ಬಳಿಹಾಗೂ ಪರಿಸರದ ಅಲ್ಲಲ್ಲಿ ತಡೆಗೋಡೆ ಕುಸಿದು ಎರಡು ವರ್ಷ ಕಳೆದಿದೆ. ತಡೆಗೋಡೆಯ ಕಲ್ಲುಗಳು ಚೆಲ್ಲಾಪಿಲ್ಲಿಗೊಂಡು ಸಮುದ್ರ ಸೇರುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ತಡೆಗೋಡೆ ಕೂಡಲೇ ನಿರ್ಮಿಸದಿದ್ದಲ್ಲಿ ಈ ಪರಿಸರದಲ್ಲಿರುವ ಮಂದಿರ ಹಾಗೂ ಹಲವು ಮನೆಗಳು ಅಪಾಯದ ಸ್ಥಿತಿಗೆ ತಲುಪುವ ಸದ್ಯತೆಯಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಕುಸಿದು ಬಿದ್ದ ತಡೆಗೋಡೆ ನಿರ್ಮಾಣ ಹಾಗೂ ಪರಿಸರದಲ್ಲಿ ಸುಮಾರು 70 ಮೀಟರ್ ನಿರ್ಮಿಸಲಾದ ಪುಳಿಮುಟ್ಟು ನ್ನು 200 ಮೀಟರ್ ಉದ್ದಕ್ಕೆ ನಿರ್ಮಿಸಬೇಕು ಹಾಗೂ ಇತರ ಸಮಸ್ಯೆಗಳ ಬಗ್ಗೆ ದೂರನ್ನು ಇಲ್ಲಿನ ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಪದಾಧಿಕಾರಿಗಳಾದ ಚಂದ್ರಶೇಖರ ಐಲ, ಪ್ರಭಾಕರ ಸಾಲ್ಯಾನ್, ಭಾಸ್ಕರ ಸಾಲ್ಯಾನ್, ಕೃಷ್ಣ ಸಾಲ್ಯಾನ್, ಮನೋಜ್ ಬಂಗೇರ ನೇತ್ಯೃತ್ವದಲ್ಲಿ ಇತ್ತೀಚೆಗೆ ಮೂಸೊಡಿ ಹಾರ್ಬಾರ್ ಗೆ ಭೇಟಿ ನೀಡಿದ ಫಿಶರೀಶ್ ಸಚಿವರಿಗೆ ನೀಡಿದ್ದಾರೆ.





