ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯಕ್ಕೆ ನೂತನವಾಗಿ ನಿರ್ಮಿಸಲಾದ ಸ್ವಾಗತ ಗೋಪುರದ ಉದ್ಘಾಟನೆ ಗುರುವಾರ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ದೇವಾಲಯಗಳ ಮೂಲಕ ಧಾರ್ಮಿಕ ಪ್ರಜ್ಞೆ, ಸಂಘಟಿತರಾಗುವ ಮೂಲಕ ಸಾಮಾಜಿಕ ಏಕತೆಗೆ ಪ್ರೇರಣೆಯಾಗುತ್ತದೆ. ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಸುಸಜ್ಜೀಕರಿಸುವುದರಿಂದ ದೇಗುಲ ಭೇಟಿಗೆ ಆಕರ್ಷಣೆಯೊದಗಿಸಿ ತನ್ಮೂಲಕ ಸಕಾರಾತ್ಮಕತೆಗೆ ಕಾರಣವಾಗುತ್ತದೆ. ಭಗವಂತನಿಗೊದಗಿಸುವ ಸೇವೆಗಳು ನಮ್ಮೊಳಗಿನ ಅಂತಃಸತ್ವವನ್ನು ಉದ್ದೀಪಿಸಿ ದೈವ ಸಾಕ್ಷಾತ್ಕಾರ ಒದಗಿಸುತ್ತದೆ ಎಂದು ಅವರು ತಿಳಿಸಿದರು.
ಟ್ರಸ್ಟಿ ನರಸಿಂಹ ಭಟ್, ಸೇವಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಭಟ್ ಪುದುಕೋಳಿ, ದಾನಿ ಶಶೀಂದ್ರ ಕುಂಬಳೆ, ನಿವೃತ್ತ ಮುಖ್ಯೋಪಾಧ್ಯಾಯ ಮಾನ ಮಾಸ್ತರ್ ಮಾನ್ಯ ಉಪಸ್ಥಿತರಿದ್ದು ಮಾತನಾಡಿದರು. ಗೋಪಾಲ ಭಟ್ ಪಟ್ಟಾಜೆ, ಗಣೇಶ ಭಟ್ ಪಟ್ಟಾಜೆ, ರಾಮ ಕಾರ್ಮಾರು ಹಾಗೂ ಮಹಿಳಾ ಸಮಿತಿ, ಸೇವಾ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರೊ..ಎ.ಶ್ರೀನಾಥ್ ಸ್ವಾಗತಿಸಿ, ಶ್ಯಾಮ ಪ್ರಸಾದ್ ಮಾನ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಈ ಸಂದರ್ಭ ದಾನಿಗಳಾದ ಶಶೀಂದ್ರ ಕುಂಬಳೆ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ನವಕಾಭಿಷೇಕ ಸಹಿತ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು.


