HEALTH TIPS

ಸಂವೇದನೆಯನ್ನು ಜಾಗೃತಗೊಳಿಸುವ ಕೆಲಸವನ್ನು ಕಾರಂತರ ಕಾದಂಬರಿಗಳು ಮಾಡುತ್ತವೆ- ಡಾ.ಮಹೇಶ್ವರಿ ಯು

        ಬದಿಯಡ್ಕ: ಸ್ತ್ರೀ ಪರವಾದ ಚಿಂತನೆ ಕಾರಂತರ ಕಾದಂಬರಿಗಳ ಜೀವಾಳವಾಗಿದೆ. ಹೆಣ್ಣಿನ ಚಿತ್ರಣ ಮೇಲ್ನೋಟದ ವಿವರಣೆಯಾಗದೆ ಅಂತರಂಗದ ಅನನ್ಯ ಧ್ವನಿಯಾಗಿ ಕಾಣಿಸಿಕೊಂಡಿದೆ. ಕಾರಂತರು ತಮ್ಮ ಕಾದಂಬರಿಗಳಲ್ಲಿ ವಸ್ತು ಮತ್ತು ತಂತ್ರದಲ್ಲಿ ಪ್ರಯೋಗಶೀಲತೆಯನ್ನು ತಂದವರು. ಹಾಗಾಗಿಯೇ ಅವರ ಕಾದಂಬರಿಗಳಾದ ಸರಸಮ್ಮನ ಸಮಾಧಿ, ಮೈಮನಗಳ ಸುಳಿಯಲ್ಲಿ, ಬೆಟ್ಟದ ಜೀವ ಇವುಗಳಲ್ಲಿ ಸ್ತ್ರೀ ಎದುರುಗೊಳ್ಳುವ ಸಮಾಜ ಭಿನ್ನ ಭಿನ್ನವಾಗುತ್ತದೆ. ಯಾವುದೇ ನಿರ್ದಿಷ್ಟ ನಿಲುವಿಗೆ ಕಟ್ಟು ಬೀಳದೆ ಕಾರಂತರು ವಾಸ್ತವಿಕ ನೆಲೆಯಲ್ಲಿ ತಮ್ಮ ಕಾದಂಬರಿಗಳನ್ನು ರಚಿಸಿದ್ದಾರೆ. ಹೆಣ್ಣನ್ನು ಜೀವ ಭಾವವುಳ್ಳ ಮಾನುಷಿಯಾಗಿ ಕಾರಂತರು ಚಿತ್ರಿಸುತ್ತಾರೆ. ಸ್ತ್ರೀವಾದಿ ಚಿಂತನೆ ಸ್ತ್ರೀಯರಿಗೆ ಮಾತ್ರ ಸಂಬಂಧಿಸಿರುವುದಲ್ಲ, ಪುರುಷನಿಗೂ ಸಂಬಂಧಿಸಿದ್ದಾಗಿದೆ. ಸ್ತ್ರೀ ಚಿಂತನೆಯ ಗ್ರಹಿಕೆ ಸಮಗ್ರವಾಗಿರಬೇಕು. ಕಾರಂತರ ಕಾದಂಬರಿಗಳಲ್ಲಿ ಸ್ತ್ರೀಪರ ಚಿಂತನೆ ಮಡುಗಟ್ಟಿದೆ. ಸಾಮಾಜಿಕ ಎಚ್ಚರವನ್ನು ,ಸಂವೇದನೆಯನ್ನು ಜಾಗೃತಗೊಳಿಸುವ ಕೆಲಸವನ್ನು ಕಾರಂತರ ಕಾದಂಬರಿಗಳು ಮಾಡುತ್ತವೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮಹೇಶ್ವರಿ ಯು. ಅಭಿಪ್ರಾಯಪಟ್ಟರು.

             ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ, ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಏಳನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

          'ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀವಾದಿ ಚಿಂತನೆ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು 'ಗಂಡು ಹೆಣ್ಣಿನ ಬದುಕಿನ ನೈಜತೆಯನ್ನು ಶೋಧಿಸುವುದು ಕಾರಂತರ ಕಾದಂಬರಿಗಳ ಕಾಳಜಿಯಾಗಿತ್ತು. ಬೇರೆ ಬೇರೆ ಪಾತ್ರಗಳ ಮೂಲಕ ಹೆಣ್ಣಿನ ಆತಂಕ, ನೋವು,ಸವಾಲುಗಳನ್ನು ಸಶಕ್ತವಾಗಿ  ಚಿತ್ರಿಸುವುದರ ಜೊತೆಗೆ ಸಾಮಾಜಿಕವಾಗಿ ಅವಳ ಸ್ಥಾನಮಾನವನ್ನೂ ಅನಾವರಣಗೊಳಿಸಿದ್ದಾರೆ.  ಕಾರಂತರು ಕಾದಂಬರಿಗಳಲ್ಲಿ ಮೌಲ್ಯಗಳ ಅನ್ವೇಷಣೆಯನ್ನು ಜೀವಪರವಾಗಿ ಕಾಣಿಸುತ್ತಾರೆ. ಕಾದಂಬರಿಗಳು ಹೆಣ್ಣಿನ ಭವಣೆಗಳ ಚಿತ್ರಣದ ಜೊತೆಗೆ ಪ್ರತಿಭಟನೆಯನ್ನೂ ದಾಖಲಿಸುತ್ತವೆ. ಆ ಮೂಲಕವಾಗಿ ಕಾರಂತರು ಹೆಣ್ಣಿನ ಮನಸ್ಸಿನ ಶೋಧವನ್ನು ಮಾಡುತ್ತಾರೆ. ಸಾಮಾಜಿಕ ಬದಲಾವಣೆಯನ್ನು ಕೇಂದ್ರವಾಗುಳ್ಳ ಕಾದಂಬರಿಗಳಲ್ಲಿ ಸ್ತ್ರೀ ಸ್ವಾತಂತ್ರ್ಯದ ಕುರಿತು ಪ್ರಶ್ನೆಗಳನ್ನೂ ಎತ್ತುತ್ತದೆ. ಜೀವಪರವಾದ ದೃಷ್ಟಿಕೋನ ಕಾರಂತರ ಕಾದಂಬರಿಗಳಲ್ಲಿ ಪ್ರತಿಬಿಂಬಿತವಾಗಿದೆ. ಕಾರಂತರ ಕಾದಂಬರಿಗಳನ್ನು ಓದದೆ ಕರ್ನಾಟಕದ ಸ್ತ್ರೀವಾದವನ್ನು ಗ್ರಹಿಸಲು ಸಾಧ್ಯವಿಲ್ಲ ಎಂದರು.

          ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಗೆ ತನ್ನದೇ ಆದ ಪಾತ್ರವಿದೆ. ಮಹಿಳೆ ಇಂದು ಸಮುದಾಯದಲ್ಲಿ ದುಡಿಯುತ್ತಿದ್ದಾಳೆ. ಬದುಕುವ ಪರಿಸರವೂ ಬದಲಾಗಿದೆ. ಆದರೆ ಹೆಣ್ಣಿನ   ಸ್ಥಾನಮಾನ ಬದಲಾಗಿಲ್ಲ. ಪುರುಷ - ಮಹಿಳೆಯರ ನಡುವೆ ಸಮಾನತೆ ಬರಬೇಕಾಗಿದೆ. ಶಿವರಾಮ ಕಾರಂತರ ಕಾದಂಬರಿಗಳು ಜೀವನ ಸತ್ಯವನ್ನು ಹುಡುಕಾಟ ನಡೆಸುತ್ತವೆ ಎಂದರು

            ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ವಿಸ್ಮಯ ಟಿ ಕೆ, ಸ್ವಾಗತಿಸಿ, ಇಂದು ವಂದಿಸಿದರು. ನಿಶ್ಮಿತ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries