ಕುಂಬಳೆ: 2021 ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ. ಪ್ರಥಮ ವಿಜೇತೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ರಮ್ಯಾ ನೆಕ್ಕರೆಕಾಡು ಅವರಿಗೆ ಲಭಿಸಿದೆ. ಇವರು ಬಂಟ್ವಾಳ ತಾಲೂಕಿನ ವಿಟ್ಲದ ನೆಡ್ಳೆ, ಈಶ್ವರ ಭಟ್ ಹಾಗೂ ನಳಿನಿ ದಂಪತಿಯ ಪುತ್ರಿ. ಇವರು ಬರೆದ 'ಒಪ್ಪಿ' ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.
ಹವ್ಯಕ ಪತ್ತೇದಾರಿ ಕಾದಂಬರಿ, ಲಘುಬರಹ,ಹಾಗೂ ಸಣ್ಣ ಕಥೆಗಳನ್ನು ಬರೆದಿರುತ್ತಾರೆ.
ಅಭಿಜ್ಞಾ ಬೊಳುಂಬು ಬರೆದಿರುವ 'ಕಾಫಿ ಕುಡಿದ ಜರ್ನಲಿಸ್ಟ್' ಕಥೆಗೆ ದ್ವಿತೀಯ ಬಹುಮಾನ ದೊರಕಿರುತ್ತದೆ. ಕಾಸರಗೋಡು ಬದಿಯಡ್ಕದ ದಿನೇಶ ಬೊಳುಂಬು ಹಾಗೂ ಗಾನಲತಾ ದಂಪತಿಗಳ ಪುತ್ರಿಯಾದ ಈಕೆ ಎಸ್.ಎ.ಪಿ.ಎಚ್.ಎಸ್.ಎಸ್.ಅಗಲ್ಪಾಡಿ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ. ಅನೇಕ ಕಥೆ,ಕವನಗಳನ್ನು ಬರೆದ ಇವರು ಕೊಡಗಿನ ಗೌರಮ್ಮ ಕಥಾಸ್ಪರ್ಧೆಯಲ್ಲಿ ಈ ಮೊದಲು ಭಾಗವಹಿಸಿರುತ್ತಾರೆ.
ಕಲ್ಮಡ್ಕ ನಿವಾಸಿ ರಜನಿ ಭಟ್ ಅವರಿಗೆ ತೃತೀಯ ಬಹುಮಾನ ಲಭ್ಯವಾಗಿದೆ. ಮಂಗಳೂರಲ್ಲಿ ಅಕೌಂಟೆಂಟ್ ಆಗಿರುವ ಸುಬ್ರಹ್ಮಣ್ಯ ಅವರ ಪತ್ನಿಯಾಗಿರುವ ಇವರು ಇಬ್ಬರು ಮಕ್ಕಳೊಂದಿಗೆ ಸಂಸಾರಸ್ಥರಾಗಿದ್ದಾರೆ. ಇವರ 'ಮುದುಡಿದ ತಾವರೆ ಅರಳಿತ್ತು' ಕಥೆ ತೃತೀಯ ಬಹುಮಾನ ಪಡೆದಿರುತ್ತದೆ. ಇವರಿಗೆ ಈ ಬಾರಿ ಒಪ್ಪಣ್ಣನೆರೆಕರೆ ಪ್ರತಿಷ್ಠಾನದಿಂದ ಕಥಾವಿಭಾಗಸಲ್ಲಿ ಪ್ರಥಮ ಬಹುಮಾನ ಬಂದಿದ್ದಲ್ಲದೆ ಆಕಾಶವಾಣಿ ಹಾಗೂ ಕೆಲವು ಪತ್ರಿಕೆಗಳಲ್ಲಿ ಇವರ ಕಥೆ ಪ್ರಕಟಗೊಂಡಿದೆ.
ತೀರ್ಪುಗಾರರಾಗಿ ಕವಿ ಹಾಗೂ ಹವಿಗನ್ನಡದಲ್ಲೂ ಅಪಾರ ಸಾಹಿತ್ಯ ಅನುಭವವುಳ್ಳ ವಿ.ಬಿ.ಕುಳಮರ್ವ, ಮಂಜೇಶ್ವರ ಶ್ರೀ ಅನಂತೇಶ್ವರ ಹೈಸ್ಕೂಲಿನ ಅಧ್ಯಾಪಕ ಹೊನ್ನಾವರ ಖರ್ವಾ ದವರಾದ ನಾರಾಯಣ ಹೆಗ್ಡೆ ಹಾಗೂ ಲೇಖಕಿ ಶೀಲಾಲಕ್ಷ್ಮಿ ವರ್ಮುಡಿ ಕಾಸರಗೋಡು ಇವರುಗಳು ತೀರ್ಪುಗಾರರಾಗಿದ್ದರು.



