ಕಾಸರಗೋಡು: ಕೃಷಿ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ 41 ಕೃಷಿಭವನಗಳಲ್ಲಿ ಕೃಷಿಸಾಧಕರಿಗೆ ಅಭಿನಂದನೆ ಜರುಗಿತು. ಈ ಸಂದರ್ಭ ಕೃಷಿ ಕಾರ್ಮಿಕರು, ಮಹಿಳೆಯರು, ಪರಿಶಿಷ್ಟ ಜಾತಿ-ಪಂಗಡ ವಿಭಾಗದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಸಿಂಹ ಮಾಸದ ಒಂದನೇ ದಿನವನ್ನು ಕೇರಳಾದ್ಯಂತ ಕೃಷಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಕೃಷಿಕ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ 57 ಕೃಷಿ ಸಂತೆಗಳಿಗೆ ಚಆಲನೆ ನೀಡಲಾಗಿದೆ. ಓಣಂ ಹಬ್ಬದ ಉತ್ರಾಡಂ ದಿನ ವರೆಗೆ ಓಣಂ ಸಂತೆಗಳು ಚಟುವಟಿಕೆ ನಡೆಸಲಿವೆ. ಕೃಷಿಭವನಗಳ ವ್ಯಾಪ್ತಿಯ ಕೃಷಿಕರಿಂದ ಹಾಗೂ ಉಳಿದೆಡೆಯಿಂದ ತರಕಾರಿ ಉತ್ಪನ್ನಗಳನ್ನು ಶೇ 10ರ ಬೆಲೆ ಅಧಿಕ ನೀಡಿ ಖರೀದಿಸಿ, ಓಣಂ ಸಂತೆಗಳಲ್ಲಿ ಮಾರುಕಟ್ಟೆಗಿಂತ ಶೇ 30 ದರ ಕಡಿತದಲ್ಲಿ ಸಾರ್ವಜನಿಕರಿಗೆ ತರಕಾರಿಗಳನ್ನು ಮಾರಾಟ ನಡೆಸಲಾಗುತ್ತಿದೆ.
ಮಂಜೇಶ್ವರ ಬ್ಲಾಕ್‍ನಲ್ಲಿ ಏಳು, ಕಾರಡ್ಕ ಬ್ಲೋಕ್‍ನಲ್ಲಿ ಎಂಟು, ಕಾಸರಗೋಡು, ಪರಪ್ಪ ಹಾಗೂ ಕಾಞಂಗಾಡು ಬ್ಲೋಕ್ ನಲ್ಲಿ ತಲಾ 10, ನೀಲೇಶ್ವರ ಬ್ಲೋಕ್ ನಲ್ಲಿ 11 ಓಣಂ ಸಂತೆಗಳು ಚಟುವಟಿಕೆ ಆರಂಭಿಸಿವೆ.
ಕಾಸರಗೋಡು ನಗರಸಭೆ ವತಿಯಿಂದ ನಡೆದ ಕೃಷಿಕರ ದಿನವನ್ನು ಶಾಸಕ ಎನ್.ಎ ನೆಲ್ಲಿಕುನ್ನು ಉದ್ಘಾಟಿಸಿದರು. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯಿತಿ ಮತ್ತು ಕೃಷಿಭವನ ವತಿಯಿಂದ ಕೃಷಿಕ ದಿನಾಚರಣೆ ಚೊಯ್ಯಂಗೋಡು ಎಂಬಲ್ಲಿ ಜರುಗಿತು. ಗ್ರಾಪಂ ಅಧ್ಯಕ್ಷ ಟಿ.ಕೆ.ರವಿ ಉದ್ಘಾಟಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಸಿ.ಎಚ್.ಅಬ್ದುಲ್ ನಾಸರ್ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಾಧಕರಿಗೆ ಅಭಿನಂದನೆ ನಡೆಯಿತು. ಜಿಲ್ಲಾ ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾ ರಾಣಿ, ಕೃಷಿ ಸಹಾಯಕ ನಿರ್ದೇಶಕಿ ಡಿ.ಎನ್.ಸುಮಾ, ಬ್ಲೋಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.



