ಬದಿಯಡ್ಕ: ವಾಂತಿಚ್ಚಾಲಿನ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ 53ನೇ ವರ್ಷದ ಆಟಿಟೊಂಜಿ ಅಟ್ಟಣೆ ವಿಶೇಷ ಕಾಙರ್ಯಕ್ರಮ ಶನಿವಾರ ವಾಂತಿಚ್ಚಾಲ್ ಲಕ್ಷ್ಮೀ ನಿಲಯದಲ್ಲಿ ನಡೆಯಿತು.
ಸಮಾರಂಭವನ್ನು ನಾಗಬ್ರಹ್ಮ ಮಲರಾಯಿ ತರವಾಡಿನ ಅಧ್ಯಕ್ಷ ಚೆನ್ನಪ್ಪ ಎರುಗಲ್ಲು ಉದ್ಘಾಟಿಸಿದರು.ಗ್ರಾ.ಪಂ. ಸದಸ್ಯ ಈಶ್ವರ ಮಾಸ್ತರ್ ಕುಂಟಾಲುಮೂಲೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳುನಾಡಿನ ಆಚಾರ ವಿಚಾರ, ಸಂಸ್ಕøತಿ ಸಂವರ್ಧನೆಯಲ್ಲಿ ಜಿ.ಕೆ.ಚಾರಿಟೇಬಲ್ ಟ್ರಸ್ಟ್ ನ ನಿರಂತರ ಚಟುವಟಿಕೆ ಶ್ಲಾಘನೀಯ. ಯುವ ತಲೆಮಾರಿಗೆ ಮಾರ್ಗದರ್ಶಕವಾಗಿ, ಸಮರ್ಥ ಹಿರಿಯರ ಮಾರ್ಗದರ್ಶನಗಳೊಂದಿಗೆ ಟ್ರಸ್ಟ್ ನ ಬಹುಮುಖ ಕಾರ್ಯಯೋಜನೆಗಳು ಇನ್ನಷ್ಟು ಮೂಡಿಬರಲಿ ಎಂದವರು ತಿಳಿಸಿದರು.
ಬಹುಮುಖ ಬಾಲಪ್ರತಿಭೆ ವರ್ಷಾ ಲಕ್ಷ್ಮಣ್ ಅವರು ಆಟಿದ ಪೊಲಬಿನ ಬಗ್ಗೆ ಮಾತನಾಡಿ, ಪೂರ್ವಕಾಲದ ಆಚಾರಗಳು ಇಂದು ಮರೆಯಾಗಿದ್ದರೂ ಕೃಷಿ ಸಂಬಂಧಿ ಪರಂಪರೆಯ ತುಳುನಾಡಿನ ಪರಂಪರೆಯನ್ನು ಆಟಿ ಮಾಸಾಚರಣೆ ಬಿಂಬಿಸುತ್ತದೆ. ಆಟಿ-ಸೋಣ ತಿಂಗಳುಗಳು ಸುಖ-ದುಃಖಗಳ ಸೂಚಕವಾಗಿದ್ದು, ಜಗತ್ತಿನ ಮಾತಾಪಿತೃಗಳಾದ ಪಾರ್ವತಿ-ಪರಮೇಶ್ವರರ ಆರಾಧನೆಗೈಯ್ಯುವ ವಿಶೇಷ ಕಾಲಘಟ್ಟ. ದೇಹಾರೋಗ್ಯಕ್ಕೆ ಪೂರಕವಾದ ಗಡ್ಡೆ-ಗೆಣಸುಗಳ ಧಾರಾಳ ಬಳಕೆಯ ಮೂಲಕ ಈ ತಿಂಗಳು ಸುದೃಢ ಆರೋಗ್ಯ ಕಾಪಿಡಲು ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ಪೂರ್ವಜರು ಕಂಡುಕೊಂಡ ಋತುಮಾನಕ್ಕನುಗುಣವಾದ ಬದುಕುವ ರೀತಿ ಅಚ್ಚರಿಯೊಂದಿಗೆ ಜೀವನದ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.
ಸುಂದರ ಕುಲಾಲ್ ಕಟ್ನಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭ ಪೈವಳಿಕೆ ಚಿತ್ತಾರಿ ಚಾವಡಿಯ ಮಣಿಯಾನ ಮಂಜಪ್ಪ ಮೂಲ್ಯ ಪರಪ್ಪು, ರಾಮ ಖಂಡಿಗೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ ಪ್ರತಿಭಾವಂತ ವಿದ್ಯಾರ್ಥಿ ರಶ್ಮಿ ಮುಳಿಯಡ್ಕ ಅವರಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವಾರ್ಪಣೆ ನಡೆಯಿತು. ಜಿಸನ್ ವಾಂತಿಚ್ಚಾಲ್ ಪ್ರಾರ್ಥಿಸಿದರು. ಅಶ್ವತ್ ಏತಡ್ಕ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿದರು. ಚಾರಿಟೇಬ್ಲ್ ಟ್ರಸ್ಟ್ ನ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸಂಯೋಜಿಸಿದರು.





