ಕಾಸರಗೋಡು: ಮಳೆಗಾಲಕ್ಕೆ ಪೂರ್ವಭಾವಿಯಾಗಿ ರಾಜ್ಯ ಸರಕಾರ ಜಾರಿಗೊಳಿಸಿದ ಶುಚೀಕರಣ ಯಜ್ಞ ಕಾರ್ಯಕ್ರಮದಲ್ಲಿ ಅತ್ಯಧಿಕ ಪ್ರಮಾಣದ ಅಜೈವಿಕ ತ್ಯಾಜ್ಯ ತೆರವುಗೊಳಿಸಿದ ಸ್ಥಳೀಯಾಡಳಿತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಅಜಾನೂರು ಗ್ರಾಮ ಪಂಚಾಯತ್ ಪಾತ್ರವಾಗಿದೆ.
174.48 ಟನ್ ತ್ಯಾಜ್ಯವನನು ಈ ಗ್ರಾಮ ಪಂಚಾಯತ್ ತೆರವುಗೊಳಿಸಿ, ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಜೈವಿಕ ತ್ಯಾಜ್ಯಗಳನ್ನು ತೆರವುಗೊಳಿಸಿರುವ ಪ್ರಮಾಣದಲ್ಲಿ ದಾಖಲೆಯ ಸಾಧನೆಯೂ ಇದಾಗಿದೆ.
ಜೂ.4,5,6ರಂದು ಪಂಚಾಯತ್ ನ 23 ವಾರ್ಡ್ ಗಳಲ್ಲಿ ಶುಚೀಕರಣ ಚಟುವಟಿಕೆ ನಡೆದಿತ್ತು. ಇದರ ಅಂಗವಾಗಿ ಮನೆಮನೆಗಳಿಂದ ಬಳಕೆಯಿಲ್ಲದ ಪಾದರಕ್ಷೆ, ಚೀಲ, ಬಟ್ಟೆ ಬರೆ, ಪ್ಲಾಸ್ಟಿಕ್ ವಸ್ತುಗಳು, ಸಿಮೆಂಟ್ ಗೋಣಿಗಳು, ಬಲ್ಬುಗಳು, ಕನ್ನಡಿ ಚೂರುಗಳು, ಬಾಟಲಿ ಇತ್ಯಾದಿಗಳ ಸಹಿತ ಎಲ್ಲ ರೀತಿಯ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯತ್ ನ ಸಂಸ್ಕರಣೆ ಕೇಂದ್ರಕ್ಕೆ ತಲಪಿಸಲಾಗಿತ್ತು. ಅಲ್ಲಿಂದ ಹರಿತ ಕ್ರಿಯಾ ಸೇನೆ ಸದಸ್ಯರು ತ್ಯಾಜ್ಯ ಗಳನ್ನು ವಿಂಗಡಿಸಿ ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಿದ್ದರು.
ವಾರ್ಡ್ ಸದಸ್ಯರ ನೇತೃತ್ವದಲ್ಲಿ ಜಾಗೃತಿ ಸಮಿತಿ ಸದಸ್ಯರು, ಹರಿತ ಕ್ರಿಯಾ ಸೇನೆ ಸದಸ್ಯರು ಈ ಚಟುವಟಿಕೆಗಳನ್ನು ನಡೆಸಿದರು. ಆಗಸ್ಟ್ ತಿಂಗಳಲ್ಲಿ ಕನ್ನಡಿ ಚೂರುಗಳು, ಬಾಟಲಿಗಳು ಇತ್ಯಾದಿಗಳನ್ನು ಸಂಗ್ರಹಿಸಲು ಹರಿತ ಕ್ರಿಯಾ ಸೇನೆ ಸದಸ್ಯರು ನಿರ್ಧರಿಸಿದ್ದಾರೆ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಪಂಚಾಯತ್ ಅಧ್ಯಕ್ಷೆ ಟಿ.ಶೋಭಾ ವಿನಂತಿಸಿದರು.





