ಪಾಲಕ್ಕಾಡ್: ರಾಜ್ಯದಲ್ಲಿ ಹಾಲಿನ ಬೆಲೆಯನ್ನು ಏರಿಸುವ ಬಗ್ಗೆ ಈ ವರೆಗೆ ಚಿಂತನೆ ನಡೆಸಿಲ್ಲ ಎಂದು ಮಿಲ್ಮಾ ಚೇರ್ಮನ್ ಕೆಎಸ್ ಮಣಿ ಅವರು ಹೇಳಿದ್ದಾರೆ. ಮನೆ ವಿತರಣಾ ವ್ಯವಸ್ಥೆಯನ್ನು ಬಳಸಿಕೊಂಡು ಉತ್ಪನ್ನಗಳನ್ನು ಮನೆ ಮನೆಗೆ ತಲುಪಿಸಲು ಮಿಲ್ಮಾ ಪ್ರಯತ್ನಿಸುತ್ತಿದೆ. ಮಿಲ್ಮಾ ತನ್ನ ವರ್ಚಸ್ಸನ್ನು ಬಲಗೊಳಿಸಿ ವಿಶ್ವಾಸಾರ್ಹ ವಸ್ತುಗಳ ಮೂಲಕ ಮಾರುಕಟ್ಟೆಯನ್ನು ಗೆಲ್ಲುವ ಗುರಿ ಹೊಂದಿದೆ. ಕೊರೋನಾದಿಂದ ಉಂಟಾದ ಬಿಕ್ಕಟ್ಟಿನಿಂದ ಪಾರಾಗಲು ಹೈನುಗಾರರಿಗೆ ಸಹಾಯ ಮಾಡಲು ನೂತನ ಯೋಜನೆಗಳು ಜಾರಿಗೊಳ್ಳಲಿದೆ. ಆರೋಗ್ಯ ಇಲಾಖೆ ಮತ್ತು ಹೈನುಗಾರಿಕೆ ಇಲಾಖೆ ಅಂತರ್ ರಾಜ್ಯ ಗಡಿಗಳ ಮೂಲಕ ಅಕ್ರಮ ಹಾಲು ಮಾರಾಟ ತಡೆಯಲು ಚೆಕ್ ಪೋಸ್ಟ್ ಗಳಲ್ಲಿ ಜಂಟಿ ತಪಾಸಣೆ ನಡೆಸಲು ಯೋಜಿಸುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಮೂರು ಮಿಲ್ಮಾ ಪ್ರಾದೇಶಿಕ ಒಕ್ಕೂಟಗಳ ಅಡಿಯಲ್ಲಿ ಗರಿಷ್ಠ ಹಾಲು ಸಂಗ್ರಹಿಸಲು ಯೋಜನೆ ಸಿದ್ದಗೊಳ್ಳುತ್ತಿದೆ. ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವು ಒಳ್ಳೆಯ ಸಂಕೇತವಾಗಿದೆ. ಕೊರೋನಾ ಬಿಕ್ಕಟ್ಟು ಬಂದಾಗ, ವಲಸಿಗರು ಸೇರಿದಂತೆ ಜನರು ಜಾನುವಾರು ಸಂತಾನೋತ್ಪತ್ತಿಯತ್ತ ಗಮನ ಹರಿಸಿದರು. ಈ ಪರಿಸ್ಥಿತಿಯಲ್ಲಿ ರೈತರಿಗೆ ಸಹಾಯ ಮಾಡುವ ಕ್ರಮಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತದೆ. ಬೆಲೆ ಏರಿಸುವ ಬಗ್ಗೆ ಮಿಲ್ಮಾ ಅಥವಾ ಸರ್ಕಾರದ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ತೀವ್ರ ಸ್ಪರ್ಧೆಯ ಸಮಯದಲ್ಲಿ, ಮಿಲ್ಮಾ ತನ್ನ ವಿವಿಧ ಉತ್ಪನ್ನಗಳೊಂದಿಗೆ ಮಾರುಕಟ್ಟೆಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ ಎಂದರು.
ಕೊರೊನಾ ಅವಧಿಯಲ್ಲಿ ಸಂಗ್ರಹಿಸಿದ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಸಂಗ್ರಹಿಸಲಾಗುತ್ತದೆ. ಮಲಪ್ಪುರಂ ಮುರ್ಕನಾಡು ಹಾಲಿನ ಪುಡಿ ಉತ್ಪಾದನಾ ಘಟಕವನ್ನು ಪೂರ್ಣಗೊಳಿಸುವುದರೊಂದಿಗೆ, ಇತರ ರಾಜ್ಯಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಗಲ್ಫ್ ರಾಷ್ಟ್ರಗಳಲ್ಲದೆ ಮಿಲ್ಮಾ ಉತ್ಪನ್ನಗಳನ್ನು ಇತರ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ ಎಂದು ಅಧ್ಯಕ್ಷರು ಹೇಳಿದರು.


