ಕಾಸರಗೋಡು: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಷರಣೆ ಅಂಗವಾಗಿ ಕೇರಳ ಶಿಕ್ಷಣ ಇಲಾಖೆ ಎಲ್‍ಪಿ ಶಾಲಾ ಮಕ್ಕಳಿಗೆ ಗುರುವಾರ ಆಯೋಜಿಸಿದ್ದ ಕ್ವಿಜ್ ಸ್ಪರ್ಧೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಪಡದ ಹಾಗೂ ಕಠಿಣ ಪ್ರಶ್ನೆಗಳನ್ನು ನೀಡಿರುವ ಬಗ್ಗೆ ಮಕ್ಕಳ ಹೆತ್ತವರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದ್ದು, ಶಾಲಾ ಮಟ್ಟದಲ್ಲಿ ವಿಜೇತರಾದವರಿಗೆ ಪಂಚಾಯಿತಿ ಮಟ್ಟದಲ್ಲಿ ಸ್ಪರ್ಧೆ ನಡೆದಿತ್ತು. ಇವುಗಳಲ್ಲಿ ಬಹುತೇಕ ಪ್ರಶ್ನೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಹೊರತಾಗಿದ್ದು, ಕಮ್ಯೂನಿಸ್ಟ್-ಮಾಕ್ರ್ಸಿಸ್ಟ್ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರುವ ರೀತಿಯಲ್ಲಿ ನೀಡಲಾಗಿತ್ತು ಎಂದೂ ದೂರಿದ್ದಾರೆ. ಇಪ್ಪತ್ತು ಅಂಕಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ಕೆಲವೆಡೆ ಐದರ ಅಂಕ ದಾಟಲು ಸಾಧ್ಯವಾಗದಿರುವುದು ಹೆತ್ತವರಲ್ಲಿ ನಿರಾಸೆಗೆ ಕಾರಣವಾಗಿತ್ತು. ಪೆರ್ಲ ಶಾಲೆಯೊಂದರಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಲಭಿಸಿದ ಗರಿಷ್ಠ ಅಂಕ 2ಆಗಿತ್ತು!
ಭಾರತದ ಸ್ವಾತಂತ್ರ್ಯ ಹೋರಾಟದ ಜತೆ ಯಾವುದೇ ಸಂಪರ್ಕವಿಲ್ಲದ ಕಯ್ಯೂರು ಹೋರಾಟವನ್ನು ಮಾನದಂಡವಾಗಿರಿಸಿ ರಸಪ್ರಶ್ನೆ ತಯಾರಿಸುವ ಮೂಲಕ ವಿದ್ಯಾರ್ಥಿಗಳನ್ನು ಹಾದಿತಪ್ಪಿಸುವ ಕೆಲಸವನ್ನು ವಿದ್ಯಾಭ್ಯಾಸ ಇಲಾಖೆ ನಡೆಸಿದೆ. ಇಂತಹ ತಪ್ಪುಗಳನ್ನು ಜಿಲ್ಲಾಮಟ್ಟದಲ್ಲಿ ಆವರ್ತಿಸದಂತೆ ನೋಡಿಕೊಳ್ಳುವುದು ಶಿಕ್ಷಣ ಇಲಾಖೆ ಜವಾಬ್ದಾರಿ ಎಂಬುದಾಗಿ ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯ ಅನಿಲ್‍ಕುಮಾರ್, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರನ್ನು ವಿನಂತಿಸಿದ್ದಾರೆ.
ಶಿಕ್ಷಣ ಇಲಾಖೆಯ ತಜ್ಞ ಸಮಿತಿ ಪ್ರಶ್ನಾವಳಿ ತಯಾರಿಸಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕಿ ತಿಳಿಸಿದ್ದಾರೆ.


